ದೊಡ್ಡಬಳ್ಳಾಪುರ: ಕೃಷಿ ವಿಜ್ಞಾನ ಪದವೀಧರರು ಬರೀ ಕೃಷಿ ಅಕಾರಿಗಳಾಗಬೇಕೆಂಬ ಆಕಾಂಕ್ಷೆಯಿಂದ ಕೆಲಸ ಮಾಡದೇ ಉತ್ತಮ ಕೃಷಿಕರಾಗಿಯೂ ತೊಡಗಿಸಿಕೊಳ್ಳಬೇಕಿದೆ. ರೈತರಿಗೆ ಇಂದಿನ ಆಧುನಿಕ ಕೃಷಿ ತಂತ್ರಜ್ಞಾನಗಳು ತಲುಪಿಸುವಲ್ಲಿ ಕೃಷಿ ವಿಜ್ಞಾನಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಗಾಂಧಿ ಕೃಷಿ ವಿವಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ, ಬೆಂಗಳೂರು ಕೃಷಿ ವಿವಿಯ ಬಿಎಸ್ಸಿ(ಕೃಷಿ) ಅಂತಿಮ ವರ್ಷದ ವಿದ್ಯಾರ್ಥಿಗಳ ಸ್ಟೂಡೆಂಟ್ ರೆಡಿ ಕಾರ್ಯಕ್ರಮದಡಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಹಮ್ಮಿಕೊಂಡಿದ್ದ ಕೃಷಿ ಪರ್ವ, ಕೃಷಿ ನಾದ- ಕೃಷಿ ವಸ್ತು ಪ್ರದರ್ಶನ ಹಾಗೂ ವಿಚಾರಗೋಷ್ಟಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣದ ಅವಶ್ಯಕತೆ ಇದ್ದು, ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಗಳು ಇದಕ್ಕೆ ಇಂಬು ನೀಡುತ್ತವೆ. ಶಿಬಿರದಲ್ಲಿ ಶಿಬಿರಾರ್ಥಿಗಳ ಮತ್ತು ಗ್ರಾಮಸ್ಥರ ಜೊತೆಗಿನ ಭಾವನಾತ್ಮಕ ಒಡನಾಟ ಸದಾ ಸ್ಮರಣೆಯಲ್ಲಿರುತ್ತದೆ. ಕೃಷಿ ಪದವಿ ಪಡೆದವರು ಅಕಾರಿಗಳಾಗುವುದಕ್ಕೆ ಹಾತೊರೆಯದೇ ತಮ್ಮದೇ ಜಮೀನಿನಲ್ಲಿ ಉತ್ತಮ ಕೃಷಿಕರಾಗಿ ಕಾರ್ಯ ನಿರ್ವಹಿಸಿದರೆ ಕೃಷಿಕರಿಗೆ ಮಾದರಿಯಾಗುತ್ತದೆ. ಕೃಷಿ ಪದವಿ ಪಡೆದವರು ರೈತರಿಗೆ ಕಾಲಕಾಲಕ್ಕೆ ಅಗತ್ಯ ಮಾಹಿತಿ ನೀಡುವುದು ಹಾಗೂ ರೈತರೊಂದಿಗೆ ಸೌಜನ್ಯದಿಂದ ವರ್ತಿಸುವುದು ಮುಖ್ಯವಾಗಿದೆ ಎಂದರು.
ಕೃಷಿ ವಿವಿಯ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥ ಡಾ.ಎನ್.ಶ್ರೀನಿವಾಸ್ ಮಾತನಾಡಿ, ಕೃಷಿ ವಿವಿಯ 7ನೇ ಸೆಮಿಷ್ಟರ್ ಬಿಎಸ್ಸಿ(ಕೃಷಿ) ವಿದ್ಯಾರ್ಥಿಗಳಿಗೆ ತರಗತಿ ಪಾಠದೊಂದಿಗೆ ಪ್ರಾಯೋಗಿಕ ಅನುಭವ ನೀಡುವ ನಿಟ್ಟಿನಲ್ಲಿ ಹಾಗೂ ಕೌಶಲ್ಯ ರೂಢಿಸಿಕೊಳ್ಳಲು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಆದರೆ ಕೊವಿಡ್ ಸಮಯದಲ್ಲಿ ಈ ಶಿಬಿರಗಳನ್ನು ನಡೆಸುವುದು ಸವಾಲಾಗಿತ್ತು. ಇಲ್ಲಿನ ಗ್ರಾಮಸ್ಥರ ನೆರವು ಸಹಕಾರದಿಂದ ಶಿಬಿರ ಯಶಸ್ವಿಯಾಗಿದೆ ಎಂದರು.
ತಾಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸ್ ಮಾತನಾಡಿ, ನಾವು ಈ ಹಿಂದೆ ಕಲಿತಿದ್ದ ಕೃಷಿ ಪದವಿಗೂ ಇಂದಿನ ಕೃಷಿ ಪದವಿಗೂ ವ್ಯತ್ಯಾಸವಿದ್ದು, ಇಂದು ಆಧುನಿಕ ಕೃಷಿ ಪದ್ದತಿಗಳು ಅಳವಡಿಕೆ ಅಗತ್ಯವಾಗಿದೆ. ವಿದ್ಯಾರ್ಥಿಗಳು ಉತ್ತಮ ಕೃಷಿಕರಾಗಿ, ಕೃಷಿ ತಂತ್ರಜ್ಞಾನ ಹೊಸ ಆವಿಷ್ಕಾರಗಳ ಬಗ್ಗೆ ಅರಿವು ಮೂಡಿಸಿಕೊಂಡು ರೈತರಿಗೆ ಮಾಹಿತಿ ನೀಡಬೇಕಿದೆ ಎಂದರು.
ವಿದ್ಯಾರ್ಥಿನಿ ಕೀರ್ತನ ಶಿಬಿರದ ಸಮಗ್ರ ವರದಿ ಮಂಡಿಸಿದರು.
ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೃಷಿ ವಿವಿಯ ಸಹಾಯಕ ಪ್ರಾಧ್ಯಾಪಕರಾದ ಅರಣ್ಯ ಕೃಷಿ ವಿಭಾಗದ ಡಾ.ರಿಂಕು ಶರ್ಮ, ಜೇನು ಕೃಷಿ ವಿಭಾಗದ ಡಾ.ಬಿ.ವಿ.ಶ್ವೇತಾ, ಕೃಷಿ ಎಂಜಿನಿಯರಿಂಗ್ ವಿಭಾಗದ ಪಿ.ಎನ್.ಕೃಷ್ಣಮ್ಮ ರೈತರಿಗೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.
ಕಂಟನ ಕುಂಟೆ ಗ್ರಾ.ಪಂ ಅಧ್ಯಕ್ಷೆ ಶೋಭಾ ರಾಜಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಕೃಷಿ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕಿ ಎನ್.ಸುಶೀಲಮ್ಮ, ಪ್ರಗತಿಪರ ಕೃಷಿಕ ಶ್ರೀನಿವಾಸ ರೆಡ್ಡಿ, ಕಂಟನ ಕುಂಟೆ ಗ್ರಾ.ಪಂ ಉಪಾಧ್ಯಕ್ಷ ನಾಗರಾಜು, ಸದಸ್ಯ ರಾಮಚಂದ್ರ ರೆಡ್ಡಿ, ಪಿಡಿಓ ನಂದಿನಿ, ವಿಎಸ್‍ಎಸ್‍ಎನ್ ಅಧ್ಯಕ್ಷ ಜಯಚಂದ್ರ, ಉಪಾಧ್ಯಕ್ಷ ವೆಂಕಟರಾಜು, ಕಾರ್ಯದರ್ಶಿ ಲಕ್ಷ್ಮಮ್ಮ, ಮುಖಂಡರಾದ ಕೆ.ಎಂ. ಕೃಷ್ಣಮೂರ್ತಿ, ಸೋಮರುದ್ರ ಶರ್ಮ, ಅಪ್ಪಿ ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.
ಸಮಾರಂಭದ ಅಂಗವಾಗಿ ಮೂರು ತಿಂಗಳಿಂದ ಕೃಷಿ ವಿದ್ಯಾರ್ಥಿಗಳಿಂದಲೇ ಬೆಳೆಸಲಾಗಿದ್ದ ಬೆಳೆ ಸಂಗ್ರಹಾಲಯ, ಕೃಷಿ ವಸ್ತು ಪ್ರದರ್ಶನವನ್ನು ಗಣ್ಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……