ಬೆಂಗಳೂರು: ಪೆಟ್ರೋಲ್-ಡೀಸೆಲ್ ದರ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ದೇಶದ ಜನರಿಗೆ ಸಿಹಿ ಸುದ್ದಿ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಅದೇ ಕ್ರಮ ಅನುಸರಿಸಿದೆ.
ಸತತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ದೇಶದ ಜನತೆಗೆ ಕೇಂದ್ರ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಅಬಕಾರಿ ಸುಂಕ ಕಡಿತಗೊಳಿಸಿದ್ದು, ವಾಹನ ಸವಾರರು ಸ್ವಲ್ಪ ನಿಟ್ಟೂಸಿರು ಬಿಡುವಂತಾಗಿದೆ.
ಕೇಂದ್ರ ಸರ್ಕಾರ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಪ್ರತಿ ಲೀಟರ್ ಗೆ 5 ರೂಪಾಯಿ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 10 ರೂ. ಕಡಿತ ಮಾಡಿದೆ.
ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ್ದು, ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಸರಣಿ ಸಂದೇಶ ಬರೆದಿರುವ ಸಿಎಂ ಅವರು, ‘ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಡೀಸಲ್ ಮೇಲೆ 10 ರೂ ಹಾಗೂ ಪೆಟ್ರೋಲ್ 05 ರೂ ಕಡಿಮೆ ಗೊಳಿಸಿದ್ದು ಸ್ವಾಗತಾರ್ಹ.ಜನರಿಗೆ ದೀಪಾವಳಿಯ ಉಡಗೊರೆ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು..
ಕರ್ನಾಟಕ ರಾಜ್ಯ ಸರಕಾರವು ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ತಲಾ 7 ರೂ ಕಡಿಮೆಗೊಳಿಸಲು ನಿರ್ದರಿಸಿದೆ. ಈ ನಮ್ಮ ನಿರ್ದಾರದಿಂದ ರಾಜ್ಯ ಸರಕಾರಕ್ಕೆ ಅಂದಾಜು 2100 ಕೋಟಿ ರೂಪಾಯಿ ಕೆ.ಎಸ್.ಟಿ ಯಿಂದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಅಂದಾಜು 95.50 ರೂ ಹಾಗೂ ಡಿಸೇಲ್ ಅಂದಾಜು 81.50 ರೂ ಆಗುವ ನೀರಿಕ್ಷೆಯಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಈ ನಿರ್ಧಾರ ಇಂದು ಸಂಜೆ ಅನ್ವಯವಾಗುವುದು. ಇದು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರಾಜ್ಯದ ಜನತೆಗೆ ದೀಪಾವಳಿಯ ಉಡುಗೊರೆ. ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……