ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರದ ಹೆಸರು ಬದಲಾವಣೆ, ಜಿಲ್ಲಾ ಆಸ್ಪತ್ರೆಗೆ ಬಜೆಟ್ನಲ್ಲಿ ಅನುಮೋದನೆಯಾಗಿದ್ದರು ಹಣ ಬಿಡುಗಡೆ ಮಾಡದೇ ಇರುವುದರ ಕುರಿತಂತೆ ಪಕ್ಷಾತೀತವಾಗಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ಅವರು ತಾಲ್ಲೂಕಿನ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳು ಇವೆ. ಆದರೆ ನಮ್ಮಲ್ಲಿ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜು ಯಾವುದೂ ಸಹ ಇಲ್ಲವಾದಾಗಿದೆ. ಹೀಗಾಗಿಯೇ ತಾಲ್ಲೂಕಿಗೆ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ಮಂಜೂರಾಗಿತ್ತು. ಆಸ್ಪತ್ರೆ ನಿರ್ಮಾಣಕ್ಕೆ ಸಿದ್ದೇನಾಯಕನಹಳ್ಳಿ ಸಮೀಪ ಬೆಂಗಳೂರು-ದೊಡ್ಡಬಳ್ಳಾಪುರ ಹೆದ್ದಾರಿಗೆ ಸಮೀಪವೇ 7 ಎಕರೆ ಜಮೀನು ಸಹ ಮೀಸಲಿಡಲಾಗಿದೆ. ಹಲವಾರು ಬಾರಿ ಮನವಿ ಮಾಡಿದ್ದರು ಸಹ ಹಣ ಬಿಡುಗಡೆ ಮಾಡದೇ ಈಗ ಆಸ್ಪತ್ರೆಯನ್ನು ಬೇರೆ ತಾಲ್ಲೂಕಿಗೆ ವರ್ಗಾವಣೆ ಮಾಡುವ ಹುನ್ನಾರ ನಡೆಸಲಾಗುತ್ತಿದೆ ಎಂದು ದೂರಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗು ಅನುಕೂಲವಾಗಲಿ ಎನ್ನುವ ದೃಷ್ಠಿಯಿಂದ ದೊಡ್ಡಬಳ್ಳಾಪುರ-ದೇವನಹಳ್ಳಿ ಹೆದ್ದಾರಿ ಸಮೀಪ ಚಪ್ಪರದಕಲ್ಲಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಯಿತು. ಆದರೆ ಕೆಲವರು ಎರಡೂ ತಾಲ್ಲೂಕಿನ ಜನರಲ್ಲಿ ಭಿನ್ನಾಭಿಪ್ರಾಯ ಹುಟ್ಟುಹಾಕಲು ಹಾಗೂ ರಾಜಕೀಯ ಲಾಭಕ್ಕಾಗಿ ಜಿಲ್ಲಾ ಕೇಂದ್ರದ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.
ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ 169 ಕಿ.ಮೀ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಸೇರ್ಪಡೆಮಾಡುವ ಮೂಲಕ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ₹5 ಕೋಟಿ ಹಣವನ್ನು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿ ಇದ್ದಾಗ ಅನುಮೋದನೆ ನೀಡಲಾಗಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ರಸ್ತೆ ನಿರ್ಮಾಣಕ್ಕೆ ಮಂಜೂರಾಗಿದ್ದ ಹಣವನ್ನು ತಡೆಹಿಡಿಯಲಾಗಿದೆ. ಆಶ್ರಯ ಮನೆಗಳ ನಿರ್ಮಾಣಕ್ಕೆ ಎರಡು ವರ್ಷಗಳಿಂದಲು ಹಣ ನೀಡಿಲ್ಲ. ಬಡವರ ಮನೆ ಕಟ್ಟಿಕೊಳ್ಳುವ ಕನಸು ಭಗ್ನವಾಗಿದೆ. ಎರಡು ವರ್ಷಗಳಿಂದ ನೇಕಾರರಿಗು ಸಹ ಮನೆ ನಿರ್ಮಾಣಕ್ಕೆ ಜವಳಿ ಇಲಾಖೆಯಿಂದ ಹಣ ನೀಡಿಲ್ಲ. ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿದ್ದ ಅಧಿಕಾರನವನ್ನು ಮೊಟುಕುಗೊಳಿಸಲಾಗಿದೆ. ಗ್ರಾಮ ಪಂಚಾಯಿತಿಗಳಿಗೆ ಬರುವ ಅನುದಾನವನ್ನು ಸರ್ಕಾರ ಸೂಚಿಸದಕ್ಕೆ ಬಳಸಬೇಕಿದೆ. ಸದಸ್ಯರಿಗೆ ಯಾವುದೇ ಅಧಿಕಾರ ಇಲ್ಲದಂತಾಗಿದೆ ಎಂದರು.
ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಹೇಳಿರುವ ದೂರುಗಳು, ಮನವಿ ಹಾಗೂ ಇತರೆ ವಿಷಯಗಳ ಅನುಷ್ಠಾನಕ್ಕೆ ಪ್ರಥಮ ಆದ್ಯತೆ ನೀಡಬೇಕು. ಪಡಿತರ ಚೀಟಿ, ಮತದಾನದ ಗುರುತಿನ ಚೀಟಿ ಇಲ್ಲದೇ ಇರುವ ಬಗ್ಗೆ ಬಂದಿರುವ ದೂರುಗಳ ಕುರಿತಂತೆ ತುರ್ತಾಗಿ ಪರಿಹರಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚರಂಡಿ ಸ್ವಚ್ಛತೆ,ರಸ್ತೆಗಳ ನಿರ್ಮಾಣ,ಕುಡಿಯುವ ನೀರಿನ ಸಮಸ್ಯೆಗಳ ಕುರಿತಂತೆ ಸಾರ್ವಜನಿಕರ ಸಮಸ್ಯೆಗಳ ಪಟ್ಟಿ ಮಾಡಿಕೊಂಡ ಶಾಸಕರು ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಭೂಷಣ್ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣಸ್ವಾಮಿ, ಕಾರ್ಯದರ್ಶಿ ಸಿದ್ದರಾಜು, ಮುಖಂಡರಾದ ಜೆ.ವೈ.ಮಲ್ಲಪ್ಪ, ಪ್ರಭಾಕರ್, ದೊಡ್ಡನಂಜುಂಡಪ್ಪ, ರಾಮಮೂರ್ತಿ, ತಿಮ್ಮರಾಜ್, ವಿಠಲರಾವ್, ಗಿರೀಶ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……