ದೊಡ್ಡಬಳ್ಳಾಪುರ: ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದುತ್ತಿರುವ ಹೊರ ರಾಜ್ಯದ ಮಕ್ಕಳಿಗೆ ಅಗತ್ಯವಾದ ಉತ್ತೇಜನ ನೀಡುವುದು ಎಲ್ಲಾ ಕನ್ನಡಿಗರ ಕರ್ತವ್ಯವಾಗಬೇಕು. ಹೀಗಾಗಿ ನನ್ನ ಹುಟ್ಟುಹಬ್ಬವನ್ನು ಕನ್ನಡ ಕಲಿಯುತ್ತಿರುವ ಮಕ್ಕಳಿಗೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ಅವರ ಕನ್ನಡ ಕಲಿಕೆಗೆ ಉತ್ತೇಜನ ನೀಡುತ್ತಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಕುಮಾರ್‌ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ತಿಳಿಸಿದರು.
ಕರವೇ ಪ್ರವೀಣ್‌ಕುಮಾರ್ ಶೆಟ್ಟಿ ಬಣದ ತಾಲೂಕು ಘಟಕ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಅವರ ಜನ್ಮ ದಿನಾಚರಣೆ ಅಂಗವಾಗಿ ಮಂಗಳವಾರ ತಾಲೂಕಿನ ಕೋಡಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಲಿಯುತ್ತಿರುವ ಹೊರ ರಾಜ್ಯದ ಮಕ್ಕಳಿಗೆ ಬ್ಯಾಗ್, ಪುಸ್ತಕಗಳು ಸೇರಿದಂತೆ ಅಗತ್ಯ ಕಲಿಕಾ ಸಾಮಾಗ್ರಿಗಳ ವಿತರಣೆ ಕಾರ್‍ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ನಮಗೆ ಕನ್ನಡ ಬರುವುದಿಲ್ಲ ಎನ್ನುವುದೇ ಪ್ಯಾಷನ್ ಆಗಿ ಹೋಗಿದೆ. ಈ ಮೂಲಕ ನಮ್ಮ ತಾಯಿ ಭಾಷೆಯನ್ನೆ ತೆಗಳುವುದು ಹೆಮ್ಮ ಎಂದು ಕೊಳ್ಳುತ್ತಿರುವ ಕನ್ನಡಿಗರು ಈ ಮೂಲಕ ನಮ್ಮ ತಾಯಿಯನ್ನೆ ತೆಗಳುವ ಮೂಲಕ ನಾಚಿಕೆಗೇಡು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಯಬೇಕಾಗಿದೆ. ಕನ್ನಡ ಭಾಷೆಗೆ ಇರುವ ಶಕ್ತಿಯನ್ನು ನಾವು ಮೊದಲು ತಿಳಿದುಕೊಳ್ಳದ ಹೊರತು ನಾವು ಕನ್ನಡವನ್ನು ಉಳಿಸಿ ಬೆಳಸುವುದು ಅಸಾಧ್ಯದ ಮಾತಾಗಿದೆ. ಇಂತಹ ಕಾರ್‍ಯವನ್ನು ಪ್ರಾಥಮಿಕ ಶಿಕ್ಷಣದ ಹಂತದಿಂದಲೆ ಶಿಕ್ಷಕರು ಮಕ್ಕಳಿಗೆ ತುಂಬುವ ಬಹು ದೊಡ್ಡ ಜವಾಬ್ದಾರಿ ಅವರ ಮೇಲಿದೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಶ್ರಮಿಕ ವರ್ಗದ ಮಕ್ಕಳು ಮಾತ್ರ ಕನ್ನಡವನ್ನು ಉಳಿಸುವ ಕಾರ್‍ಯವನ್ನು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಶಾಲೆಗಳಲ್ಲಿ ಹೊರ ರಾಜ್ಯದಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡಿರುವ ಶ್ರಮಿಕ ವರ್ಗದ ಮಕ್ಕಳ ಕನ್ನಡ ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಕರವೇ ಕಾರ್‍ಯ ಶ್ಲಾಘನೀಯ ಎಂದರು.
ಹಮಾಮ್ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಕೋಡಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೊರ ರಾಜ್ಯದ ಮಕ್ಕಳಿಗೆ ಬ್ಯಾಗ್, ಪುಸ್ತಕಗಳು ಸೇರಿದಂತೆ ಅಗತ್ಯ ಕಲಿಕಾ ಸಾಮಾಗ್ರಿಗಳನ್ನು ನೀಡಲಾಯಿತು. ಇದರೊಂದಿಗೆ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು. ಕಾರ್‍ಯಕ್ರಮದಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಈ ವೇಳೆ ವಿಎಸ್‌ಎಸ್‌ಎನ್ ಅಧ್ಯಕ್ಷ ಆಂಜಿನಪ್ಪ, ಎಸ್‌ಡಿಎಂಸಿ ಅಧ್ಯಕ್ಷ ರಾಮಕೃಷ್ಣಪ್ಪ, ಕರವೇ ತಾಲೂಕು ಅಧ್ಯಕ್ಷ ಎಚ್.ಎಸ್.ವೆಂಕಟೇಶ್, ವಕೀಲರಾದ ಅನಂದ್‌ಕುಮಾರ್, ಬಿಜೆಪಿ ಮುಖಂಡ ವಿಶ್ವಾಸ್‌ಗೌಡ, ನಿವೃತ್ತ ಶಿಕ್ಷಕರಾದ ನಾಗರಾಜು ಮಾತನಾಡಿದರು.
ಕರವೇ ಪದಾಧಿಕಾರಿಗಳಾದ ಎಸ್‌ಎಲ್‌ಎನ್ ವೇಣು, ಸೊಣ್ಣಮಾರನಹಳ್ಳಿ ಆನಂದ್, ಮಂಜುನಾಥ್, ರಾಜಘಟ್ಟ ಮಹೇಶ್, ಜೋಗಹಳ್ಳಿ ಅಮ್ಮು, ಸೂರಿ ಬಾಬು, ಹಮಾಮ್ ಶಾಲೆ ಮು.ಶಿಕ್ಷಕರಾದ ಬಿ.ಎನ್.ಅಂಜನಮೂರ್ತಿ, ಶಾರದಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣ ಶಿವಕುಮಾರ್, ಚೈತ್ರ ಸುರೇಶ್, ಮುಖಂಡ ವಡ್ಡರಹಳ್ಳಿ ಶಂಕರಪ್ಪ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……