ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಒಂದು ವರದಾನವಾಗಲಿದೆ ಎಂದು ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ ಚಿಕ್ಕಣ್ಣ ಅಭಿಪ್ರಾಯಪಟ್ಟರು.
ನಗರದ ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ – 2020 ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಾಕಷ್ಟು ಜಾಗರೂಕತೆಯಿಂದ ತಮಗೆ ಆಸಕ್ತಿಯಿರುವ ಡಿಸಿಪ್ಲಿನ್ ಕೋರ್ ಮತ್ತು ಉಪಯುಕ್ತ ಓಪನ್ ಇಲೆಕ್ಟಿವ್ ತೆಗೆದುಕೊಂಡರೆ ಅವರು ಉದ್ದೇಶಿತ ವಿಷಯದಲ್ಲಿ ಪದವಿಯಾಗಲಿ ಆನರ್ಸ್ ಆಗಲಿ ಪಡೆದು ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಅನುಕೂಲವಾಗುತ್ತದೆ ಎಂದರು.
ಉಪನ್ಯಾಸ ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪಿ.ಚೈತ್ರ ಮಾತನಾಡಿ, ವಿದ್ಯಾರ್ಥಿಗಳು ಕೋರ್ಸುಗಳನ್ನು ಆಯ್ಕೆ ಮಾಡುವಾಗ ಸಾಕಷ್ಟು ಮುಂದಾಲೋಚನೆ ಮಾಡಿಕೊಳ್ಳುವುದು ಅಗತ್ಯ. ಒಂದು ವಿಷಯವನ್ನು ಕಲಿಯಲು ಸುಲಭ ಅಥವಾ ಅಂಕಗಳಿಸುವುದು ಸುಲಭವೆಂಬ ಕಾರಣದಿಂದ ಆ ವಿಷಯವನ್ನು ಆಯ್ಕೆ ಮಾಡಿಕೊಂಡರೆ ಮುಂದಿನ ಹಂತದಲ್ಲಿ ತೊಂದರೆಯಾಗಬಹುದಾದ ಸಾಧ್ಯತೆ ಇರುತ್ತದೆ ಎಂದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಕೆ.ದಕ್ಷಿಣ ಮೂರ್ತಿ ಅವರು ಮಾತನಾಡಿ, ಕನ್ನಡ, ಶಾರೀರಿಕ ಶಿಕ್ಷಣ, ಡಿಜಿಟಲ್ ಫ್ಲುಯೆನ್ಸಿ ಮೊದಲಾದ ವಿಷಯಗಳನ್ನು ಕಡ್ಡಾಯಗೊಳಿಸಿರುವುದರಿಂದ ಆ ವಿಷಯಗಳನ್ನು ಬೋಧಿಸುವ ಉಪನ್ಯಾಸಕರಿಗೆ ಬೇಡಿಕೆ ಜಾಸ್ತಿಯಾಗಬಹುದು ಎಂದರು.
ಕಾರ್ಯಕ್ರಮದಲ್ಲಿ ಇತಿಹಾಸದ ಪ್ರಾಧ್ಯಾಪಕ ಬಿ.ಶ್ರೀನಿವಾಸ್, ಕನ್ನಡ ವಿಭಾಗದ ಪ್ರಾಧ್ಯಾಪಕ ರವಿಕುಮಾರ್, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಲಕ್ಷ್ಮೀಶ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……