ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆ. ಅಸಂಘಟಿತ ಕಾರ್ಮಿಕರಿಗೆ ನೀಡುವ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಾರ್ಮಿಕರು ಸರ್ಕಾರ ದತ್ತಾಂಶದಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಉಪವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಆರ್.ನಾಗೇಂದ್ರ ತಿಳಿಸಿದರು.
ನಗರದ ಬೆಸ್ತರಪೇಟೆಯಲ್ಲಿ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್‍ನ ದೊಡ್ಡಬಳ್ಳಾಪುರ ಕ್ಷೇತ್ರ ಸಮಿತಿಯ ಕಾರ್ಯಾಲಯದ ಉದ್ಘಾಟನೆ, ಸಂಘದ ಸದಸ್ಯರಿಗೆ ಗುರುತಿನ ಚೀಟಿ ಹಾಗೂ ಇ-ಶ್ರಮ್ ಚೀಟಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಮಿಕರ ವಿಮಾ, ಭವಿಷ್ಯ ನಿಧಿ ಸೌಲಭ್ಯ ಹೊಂದಿರದ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಲಾಗುತ್ತಿದ್ದು, ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕೊವಿಡ್ ಸಂದರ್ಭದಲ್ಲಿ 12 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇದರಲ್ಲಿ ಟೈಲರ್ಸ್‍ಗಳ ಅರ್ಜಿಗಳ ಹೆಚ್ಚಿನ ಪ್ರಮಾಣದಲ್ಲಿವೆ. 18ರಿಂದ 59 ವರ್ಷದೊಳಗಿನ ಅರ್ಹರು ಆಧಾರ್, ಬ್ಯಾಂಕ್ ಪಾಸ್‍ಬುಕ್, ಉದ್ಯೋಗದ ದಾಖಲಾತಿಗಳನ್ನು ನೀಡಬೇಕಿದೆ.
ಕೇಂದ್ರ ಸರ್ಕಾರದ ಇ-ಶ್ರಮ್ ಯೋಜನೆಯಲ್ಲಿ ನೋಂದಾಯಿಸದವರಿಗೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗಲಿದೆ. ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತದಲ್ಲಿ ಟೈಲರ್ಸ್‍ಗಳು ಸೇರಿದಂತೆ 11 ಅಸಂಘಟಿತ ವಲಯಗಳಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದ್ದು, ಇದು ಸರ್ಕಾರದ ಯಾವುದೇ ನೆರವುಗಳಿಗೆ ಅನುಕೂಲವಾಗಲಿದೆ. ಸಂಘಗಳು ತಮ್ಮ ವ್ಯಾಪ್ತಿಯ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಸಿಗಲು ಸಹಕರಿಸಬೇಕೆಂದರು.
ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್.ಚಂದ್ರು ಮಾತನಾಡಿ, ಕೊವಿಡ್ ಸಂದರ್ಭದಲ್ಲಿ ಟೈಲರ್ಸ್‍ಗಳು ತೀವ್ರ ಸಂಕಷ್ಟದಲ್ಲಿದ್ದರು. ಈ ವೇಳೆ ಸರ್ಕಾರ ನೀಡಿದ ಸಹಾಯಧನ ಬಹಳಷ್ಟು ಜನರಿಗೆ ತಲುಪಲಿಲ್ಲ. ಸಂಘದ ಸದಸ್ಯರು ಸರ್ಕಾರದ ನಿಯಮಗಳಂತೆ ತಮ್ಮ ವೃತ್ತಿಯ ಗುರುತಿನ ಚೀಟಿ ಪಡೆದುಕೊಂಡು, ಸೌಲಭ್ಯಗಳನ್ನು ಪಡೆಯಬೇಕು. ಕಾರ್ಮಿಕ ಇಲಾಖೆಯ ಅಕಾರಿಗಳು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ವೃತ್ತದ ಕಾರ್ಮಿಕ ನಿರೀಕ್ಷಕ ಎಂ.ಪ್ರದೀಪ್, ಮುಖಂಡರಾದ ಚಂದ್ರು, ಸಂಘದ ಉಪಾಧ್ಯಕ್ಷ ರಾದ ಅನ್ವರ್ ಖಾನ್, ಟಿ.ಎಚ್.ಮುನಿಯಪ್ಪ, ಎಸ್.ಲೀಲಾವತಿ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ವಾಮನ್ ರಾವ್, ಖಜಾಂಚಿ ಜಯಣ್ಣ, ಕಾರ್ಯದರ್ಶಿಗಳಾದ ಎಂ.ವಸಂತ ಕುಮಾರಿ, ಮದನ ಕುಮಾರ್, ಅಮರನಾರಾಯಣಾಚಾರ್, ಬಿ.ಎನ್.ಉಷಾ ಮತ್ತಿತರರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……