ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯದವರು ಅಕ್ಟೋಬರ್ 27ರ ಬುಧವಾರ ನಡೆಯಲಿರುವ ಕೋವಿಡ್ ಲಸಿಕಾ ಮೇಳದಲ್ಲಿ ಲಸಿಕೆ ಪಡೆಯುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 2 ರಂದು ನಡೆದ ಕೋವಿಡ್ ಲಸಿಕಾ ಮೇಳದಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದವರು, ಅಕ್ಟೋಬರ್ 27ಕ್ಕೆ 84 ದಿನಗಳನ್ನು ಪೂರೈಸುವುದರಿಂದ ಲಸಿಕಾ ಮೇಳದಲ್ಲಿ ಗುರುತಿನ ಚೀಟಿ ಅಥವಾ ಕೋವಿಡ್ ಮೊದಲ ಡೋಸ್ ಪಡೆದ ವೇಳೆ ಆನ್ ಲೈನ್ ಮೂಲಕ ಪಡೆದಿರುವ ಸರ್ಟಿಫಿಕೇಟ್ ತೋರಿಸಿ, ಲಸಿಕೆ ಪಡೆಯಬಹುದು.
ಅಂತೆಯೇ, ಕೋವಾಕ್ಸಿನ್ ಮೊದಲ ಡೋಸ್ ಲಸಿಕೆ ಪಡೆದವರು, 28 ದಿನಗಳು ಪೂರೈಸಿದ್ದಲ್ಲಿ, ಎರಡನೇ ಡೋಸ್ ಲಸಿಕೆ ಪಡೆಯಬಹುದು.
ಕೋವಿಡ್ ಮಹಾಮಾರಿಯ ವಿರುದ್ಧ ಹೋರಾಡಲು ಲಸಿಕೆಯನ್ನು ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ 6,96,426 ಜನರು ಮೊದಲ ಡೋಸ್ ಹಾಗೂ 3,65,946 ಜನರು ಎರಡನೇ ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. ಲಸಿಕೆ ಪಡೆಯದಿರುವ ಜಿಲ್ಲೆಯ ಸಾರ್ವಜನಿಕರು ಲಸಿಕೆ ಪಡೆಯುವ ಮೂಲಕ, ಈ ಲಸಿಕಾ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….