ಬೆಂ.ಗ್ರಾ.ಜಿಲ್ಲೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಗ್ರಾಮಾಂತರ ವಿಭಾಗದ ವತಿಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಕಲ್ಪಿಸುವುದು ಹಾಗೂ ತಕ್ಷಣವೇ ವಿದ್ಯಾರ್ಥಿವೇತನ, ಬಸ್ ಪಾಸ್ ನೀಡುವಂತೆ ಆಗ್ರಹಿಸಿ ದೇವನಹಳ್ಳಿ ತಹಸೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಗಿದೆ.
ಈ ವೇಳೆ ಮಾತನಾಡಿದ ಎಬಿವಿಪಿ ನಗರ ಅಧ್ಯಕ್ಷ ಮಂಜುನಾಥ್,ಕರೊನಾ ಎರಡನೇ ಅಲೆಗೆ ತತ್ತರಿಸಿದ್ದ ಕರ್ನಾಟಕ ಹಂತ ಹಂತವಾಗಿ ಸ್ಥಿತಿಗೆ ಮರಳಿದೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ,ಸ್ನಾತಕೋತ್ತರ, ತರಗತಿಗಳೆಲ್ಲವೂ ಮರು ಪ್ರಾರಂಭವಾಗಿ ವಿದ್ಯಾರ್ಥಿಗಳೆಲ್ಲಾ ಉತ್ಸಾಹದಿಂದ ಶಾಲಾ- ಕಾಲೇಜುಗಳಿಗೆ ಬರುತ್ತಿರುವುದು ಸಂತೋಷದ ಸಂಗತಿ. ಆದರೆ ಭೌತಿಕ ತರಗತಿಗಳು ಆರಂಭವಾದ ಬಳಿಕ ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆಗಳು ಉದ್ಭವಿಸುತ್ತೀರಿವುದು ಶೋಚನೀಯ.
ಶಾಲಾ- ಕಾಲೇಜುಗಳು ಪ್ರಾರಂಭವಾಗಿ ವಿದ್ಯಾರ್ಥಿಗಳು ಕಲಿಕೆಯ ಕಡೆಗೆ ಉತ್ಸಾಹದಿಂದ ಗಮನ ಹರಿಸಿದ್ದಾರೆ. ಕೋವಿಡ್ ಕಾರಣಕ್ಕೆ ಬದಲಾದ ತರಗತಿಗಳ ಸಮಯಕ್ಕೆ ಹಾಜರಾಗಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಹಾಗೂ ಲಾಕ್ ಡೌನ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಸಾರಿಗೆ ಸೇವೆ ಕೆಲ ಹಳ್ಳಿಗಳಿಗೆ ಇನ್ನು ಪ್ರಾರಂಭವಾಗಿಲ್ಲ ಇದರಿಂದ ರಾಜ್ಯದ ಗ್ರಾಮೀಣ ಪ್ರದೇಶದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಾರಿಗೆ ಸಂಚಾರ ತೊಂದರೆಯಾಗಿ ಪರಿಣಮಿಸಿದೆ,ಸಾರಿಗೆ ಇಲಾಖೆಯು ತಕ್ಷಣವೇ ವಿದ್ಯಾರ್ಥಿಗಳ ಅವಶ್ಯಕತೆಗೆ ಅನುಗುಣವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸಂಚಾರ ಪ್ರಾರಂಭಿಸಬೇಕು ಹಾಗೂ ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಿದರೂ ಸಹ ಸಿಬ್ಬಂದಿಗಳ ಕೊರತೆಯಿಂದಾಗಿ ತಡವಾಗಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ದೊರೆಯುತ್ತಿದೆ ಈ ಸಮಸ್ಯೆಯನ್ನು ಬಗೆಹರಿಸಿ ಅರ್ಜಿಸಲ್ಲಿಸಿದ ವಿದ್ಯಾರ್ಥಿಗಳಿಗೆ ತಕ್ಷಣವೇ ಬಸ್ ಪಾಸ್ ನೀಡಬೇಕೆಂದರು.
ನಗರ ಸಂಘಟನಾ ಕಾರ್ಯದರ್ಶಿ ಶಿವಾನಂದ ಕಾಂಬಳೆ ಮಾತನಾಡಿ, ಡಿಪ್ಲೊಮಾ, ಇಂಜಿನಿಯರಿಂಗ್,ಸ್ನಾತ್ತಕ, ಸ್ನಾತ್ತಕೋತ್ತರ ತರಗತಿಗಳಲ್ಲಿ ಮತ್ತು ಪಿ.ಹೆಚ್.ಡಿ ಮಾಡುತ್ತಿರುವ ಪ.ಜಾತಿ, ಪ.ಪಂಗಡ,ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪೂರ್ಣಪ್ರಮಾಣದಲ್ಲಿ ಶಿಷ್ಯವೇತನ ಪಡೆಯದೆ ಪರದಾಡುವಂತಾಗಿದೆ. ರಾಜ್ಯ ಸರ್ಕಾರ ಈ ಎಲ್ಲಾ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ವಿದ್ಯಾಸಿರಿ ಶಿಷ್ಯವೇತನ ಸೇರಿದಂತೆ ಎಲ್ಲ ವಿದ್ಯಾರ್ಥಿ ವೇತನವನ್ನು ತಕ್ಷಣಕ್ಕೆ ಬಿಡುಗಡೆಗೊಳಿಸಬೇಕೆಂದು ಮತ್ತು ವಿದ್ಯಾರ್ಥಿಗಳ ಅಧ್ಯಯನಕ್ಕೆ ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನದ ಮೊತ್ತವನ್ನು ಹೆಚ್ಚಿಗೆ ಮಾಡಬೇಕೆಂದರು ಅಲ್ಲದೆ ರಾಜ್ಯದ ಅನೇಕ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಸ್ಟೆಲ್ ಗಳಿಗೆ ಅವಲಂಬಿತರಾಗಿದ್ದರೆ, ಹೊಸದಾಗಿ ಶಾಲಾ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ತರಗತಿಗಳು ಪ್ರಾರಂಭವಾಗಿವೆ ಆದರೂ ಸಹ ವಿದ್ಯಾರ್ಥಿಗಳ ವಸತಿ ನಿಲಯದ ಆಯ್ಕೆ ಪ್ರಕ್ರಿಯೆ ಮುಗಿಯದೆ ದಿನನಿತ್ಯ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ, ಸರ್ಕಾರವು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ವಸತಿ ನಿಲಯಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡುವಂತೆ ಎಬಿವಿಪಿ ಒತ್ತಾಯಿಸುತ್ತದೆ.
ರಾಜ್ಯದ ಹಿಂದಿಳಿದ ವರ್ಗ, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಇಲಾಖೆಗಳ ವ್ಯಾಪ್ತಿಗೆ ಬರುವ ವಸತಿ ನಿಲಯಗಳ ಸಂಖ್ಯೆಗೆ ಮತ್ತು ವಸತಿ ನಿಲಯಗಳಿಗೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆಗೆ ತುಂಬಾ ಅಂತರವಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ತಕ್ಷಣಕ್ಕೆವಸತಿ ನಿಲಯಗಳ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಪ್ರಸಕ್ತ ವರ್ಷದ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ವಿದ್ಯಾರ್ಥಿ ನಿಲಯಗಳನ್ನು ತೆರೆಯಬೇಕಿದೆ ಮತ್ತು ಹಾಸ್ಟೆಲ್ ಗಳಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಬೇಕೆಂದರು.
ಈ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರಾದ ನಂದೀಶ್, ಗಗನ್, ದೀಪಕ್, ಮನೋಜ್ ಇತರರು ಉಪಸ್ಥಿತರಿದ್ದರು…
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ………