![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ಬೆಂ.ಗ್ರಾ.ಜಿಲ್ಲೆ: 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ 2021ರ ಅಕ್ಟೋಬರ್ 24 ರಿಂದ 30 ರವರೆಗೆ “ಕನ್ನಡಕ್ಕಾಗಿ ನಾವು” ಎಂಬ ವಿಶೇಷ ಅಭಿಯಾನದಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ಅಕ್ಟೋಬರ್ 28ರಂದು ಬೆಳಿಗ್ಗೆ 11.00 ಗಂಟೆಗೆ ದೇವನಹಳ್ಳಿಯ ಐತಿಹಾಸಿಕ ಕೋಟೆಯ ಆವರಣದಲ್ಲಿ ಸಾಮೂಹಿಕ ಕನ್ನಡ ಗೀತ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಸರಕಾರಿ ಕಚೇರಿಗಳು ಮತ್ತು ಶಾಲಾ, ಕಾಲೇಜುಗಳು, ವಿಶ್ವವಿದ್ಯಾಲಯಗಳು, ತಾಲ್ಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ಮೂರು ಸುಮಧುರ ಕನ್ನಡ ಗೀತೆಗಳಾದ ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವ”, ಡಾ. ಕೆ.ಎಸ್.ನಿಸಾರ್ ಅಹಮದ್ ಅವರ “ಜೋಗದ ಸಿರಿ ಬೆಳಕಿನಲ್ಲಿ” ಹಾಗೂ ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” – ಸಾಮೂಹಿಕ ಗೀತ ಗಾಯನವನ್ನು ಲಕ್ಷ ಕಂಠಗಳಲ್ಲಿ ಏಕಕಾಲದಲ್ಲಿ ಹಾಡಲಿದ್ದಾರೆ.
ಅಕ್ಟೋಬರ್ 24 ರಿಂದ 30 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮತ್ತು ಜಿಲ್ಲಾ ಮಟ್ಟದ ಐಟಿ-ಬಿಟಿ ಕಂಪನಿಗಳಲ್ಲಿ, ಕೆ.ಎಸ್.ಆರ್.ಟಿ.ಸಿ, ಕೆ.ಪಿ.ಟಿ.ಸಿ.ಎಲ್. ಸಂಸ್ಥೆಗಳಲ್ಲಿ, ಕಾರ್ಖಾನೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನಾಟಕ, ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಕನ್ನಡದಲ್ಲಿ ಮಾತು ಮತ್ತು ಬರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದರಡಿ ನಾವು ಆಡುವ ಮಾತು ಕನ್ನಡದಲ್ಲಿಯೇ ಇರಬೇಕು ಎಂದು ಸಂಕಲ್ಪ ಮಾಡುವುದು. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡವನ್ನೇ ಬಳಸುವುದು, ಕನ್ನಡದಲ್ಲೇ ಬರೆಯುವುದು, ಸಹಿ ಮಾಡುವುದು ಹಾಗೂ ಸರಿಗನ್ನಡವನ್ನು ಬಳಸುವ ಅಭ್ಯಾಸ ಮಾಡುವುದು, ಕುಟುಂಬದ ಎಲ್ಲಾ ಸದಸ್ಯರು, ಮಕ್ಕಳು, ಸಂಬಂಧಿಕರು, ಅನಿವಾಸಿ ಕನ್ನಡಿಗರು, ಸುದ್ದಿ ಮಾಧ್ಯಮದವರು, ಎಲ್ಲಾ ಸರ್ಕಾರಿ ಅಧಿಕಾರಿ/ನೌಕರರು ಕನ್ನಡದಲ್ಲೇ ಮಾತನಾಡುವಂತೆ, ತಾವು ಬಳಸುವ ಚರವಾಣಿ (ಮೊಬೈಲ್) ಯಲ್ಲಿ ಸಂದೇಶಗಳನ್ನು ಕನ್ನಡದಲ್ಲೇ ಕಳುಹಿಸುವಂತೆ, ಕನ್ನಡದಲ್ಲೇ ಸಹಿ ಮಾಡುವಂತೆ ಪ್ರೇರೇಪಿಸುವುದು.
ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆಯಲ್ಲಿ ನಾಲ್ಕೈದು ನಿಮಿಷಗಳ ಕಾಲ ನಿರರ್ಗಳವಾಗಿ ಒಂದೂ ಅನ್ಯಭಾಷೆಯ ಪದಗಳನ್ನು ಬಳಸದೇ ಕೇವಲ ಕನ್ನಡದಲ್ಲೇ ಮಾತನಾಡುವ ಸ್ಪರ್ಧೆಗಳ ಆಯೋಜನೆ ಮಾಡಲಾಗುವುದು. ಉತ್ತಮ ದೃಶ್ಯಚಿತ್ರ(ಸೆಲ್ಪಿ) ಗಳನ್ನು ಆಯ್ಕೆ ಮಾಡಿ ಅತ್ಯುತ್ತಮ ಸ್ಪರ್ಧಿಗಳಿಗೆ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಬಹುಮಾನ ಕೊಡಲಾಗುವುದು.
ಗಡಿ ತಾಲ್ಲೂಕು ಕೇಂದ್ರದಲ್ಲಿ ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮದಡಿ ಗಡಿಭಾಗದ ತಾಲ್ಲೂಕು ಪ್ರದೇಶಗಳಲ್ಲಿ ನಾಡಿನ ಸಂಸ್ಕೃತಿ, ಭಾಷೆ, ಸಾಹಿತ್ಯ ಕುರಿತಾದ ಜಾಗೃತಿ ಕಾರ್ಯಕ್ರಮಗಳ ಆಯೋಜಿಸಲಾಗುವುದು.
ಎಲ್ಲರೂ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ “ಕನ್ನಡಕ್ಕಾಗಿ ನಾವು” ಅಭಿಯಾನವನ್ನು ಯಶಸ್ವಿಗೊಳಿಸೋಣ. ನಾಡು ನುಡಿಯ ರಥವನ್ನು ಎಳೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸೋಣ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..