ನವದೆಹಲಿ: ದೇಶದಲ್ಲಿ ವಿತರಣೆಯಾದ ಕೋವಿಡ್ ಲಸಿಕೆಗಳ ಪ್ರಮಾಣ 100 ಕೋಟಿ ದಾಟಿರುವ ಹಿನ್ನೆಲೆಯಲ್ಲಿ, ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಬಲವಾದ ರಕ್ಷಾ ಕವಚ ದೊರೆತಿದೆ ಎಂದು ಪ್ರಧಾನಿ ನರೇದ್ರ ಮೋದಿ ಹೇಳಿದ್ದಾರೆ.
ದೆಹಲಿಯ ಏಮ್ಸ್ ಆವರಣದಲ್ಲಿನ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯಲ್ಲಿ (ಎನ್‌ಸಿಐ) ಇನ್ಫೋಸಿಸ್ ಫೌಂಡೇಷನ್ ಸ್ಥಾಪಿಸಿದ ವಿಶ್ರಾಮ ಸದನವನ್ನು ಉದ್ಘಾಟಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ದೇಶದಲ್ಲಿ ನೀಡುತ್ತಿರುವ ಕೋವಿಡ್ ಲಸಿಕೆಯ ಡೋಸ್‌ಗಳು ಗುರುವಾರ 100 ಕೋಟಿ ದಾಟಿದ್ದು ಲಸಿಕಾ ಕಾರ್ಯಕ್ರಮದಲ್ಲಿ ಭಾರತವು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ.
2021ರ ಅಕ್ಟೋಬರ್ 21 ಈ ವಿಶೇಷ ದಿನ ದೇಶದ ಇತಿಹಾಸದಲ್ಲಿ ದಾಖಲಾಗಿದೆ. ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಈ ಶ್ರೇಯ ಸಲ್ಲುತ್ತದೆ.
ದೇಶದ ಎಲ್ಲಾ ಲಸಿಕಾ ಉತ್ಪಾದನಾ ಕಂಪನಿಗಳು, ಲಸಿಕೆ ಸಾಗಣೆಯಲ್ಲಿ ತೊಡಗಿರುವ ಕಾರ್ಮಿಕರು ಮತ್ತು ಲಸಿಕೆಗಳನ್ನು ನಿರ್ವಹಿಸುವ ಆರೋಗ್ಯ ವಲಯದ ವೃತ್ತಿಪರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಭಾರತದ ಕಾರ್ಪೊರೇಟ್ ವಲಯ, ಖಾಸಗಿ ವಲಯ ಮತ್ತು ಸಾಮಾಜಿಕ ಸಂಸ್ಥೆಗಳು ದೇಶದ ಆರೋಗ್ಯ ಸೇವೆಗಳನ್ನು ಬಲಪಡಿಸುವಲ್ಲಿ ನಿರಂತರವಾಗಿ ಕೊಡುಗೆ ನೀಡುತ್ತಿವೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜನ್ನು ಹೊಂದುವ ನಮ್ಮ ಪ್ರಯತ್ನಗಳಲ್ಲಿ ಖಾಸಗಿ ವಲಯವು ಪ್ರಮುಖ ಪಾತ್ರ ವಹಿಸುತ್ತದೆ.
ಇನ್ಫೋಸಿಸ್ ಫೌಂಡೇಷನ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಯೋಜನೆಯ ಭಾಗವಾಗಿ 806 ಹಾಸಿಗೆಗಳ ವಿಶ್ರಾಮ ಸದನವನ್ನು ನಿರ್ಮಿಸಿದೆ ಎಂದು ಹೇಳಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಫೇಸ್‌ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……