ದೊಡ್ಡಬಳ್ಳಾಪುರ: ವಸಾಹತುಶಾಹಿ ಆಡಳಿತ ನಮ್ಮೊಳಗೆ ಬಳೆಸಿದ ಕೀಳರಿಮೆಯಿಂದಾಗಿ ನಮ್ಮಲ್ಲಿನ ಇತಿಹಾಸವನ್ನೇ ಮರೆತಿದ್ದೇವೆ. ನಮ್ಮ ಸುತ್ತಲಿನ ಪರಿಯದ ಸ್ಥಳದ ಬಗ್ಗೆ ಸದಾ ನಮಗೆ ತಾತ್ಸಾರ.ಹೀಗಾಗಿಯೇ ನಿಖರವಾದ ಇತಿಹಾಸ ತಿಳಿಯುವುದು ಕಷ್ಟವಾಗುತ್ತಿದೆ ಎಂದು ಕೆಎಎಸ್ ಅಧಿಕಾರಿ ಡಾ.ನೆಲ್ಲುಕುಂಟೆ ವೆಂಕಟೇಶಯ್ಯ ಹೇಳಿದರು.
ಅವರು ನಗರದ ಕನ್ನಡ ಜಾಗೃತ ಭವನದಲ್ಲಿ ಬುಧವಾರ ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ಥಳನಾಮಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಇತಿಹಾಸದ ಪ್ರತಿ ಹೆಜ್ಜೆಯಲ್ಲೂ ರಾಜಕೀಯ ಇದ್ದೇ ಇರುತ್ತದೆ. ಇಂದು ಹಲವಾರು ದೇಶಗಳು ತಮ್ಮ ಹಿಂದಿನ ಸಂಸ್ಕೃತಿಯನ್ನು ಮತ್ತೆ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಚರಿತ್ರೆಯನ್ನು ದಾಖಲಿಸುವಾಗ ವಿಮಾರ್ಶಾತ್ಮಕ ಇಲ್ಲದೇ ಇದ್ದರೆ ರಕ್ತಪಾತಗಳಿಗೆ ಕಾರಣವಾಗಲಿದೆ. ಭಾರತದ ಸಂಸ್ಕೃತಿ ಕೃಷಿ ಮತ್ತು ಪಶುಪಾಲನೆಯನ್ನು ಆವಲಂಭಿಸಿಕೊಂಡೇ ರೂಪಿತವಾಗಿದೆ. ವಾಣಿಜ್ಯ ಮಾರ್ಗಗಗಳು ಇತಿಹಾಸ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತ ಬಂದಿವೆ. ಇದೇ ಮಾರ್ಗಗಳು ಹಲವಾರು ಧಾರ್ಮಿಕ ಪಂಥಗಳು ಬೆಳೆಯಲು ಸಹ ಕಾರಣವಾಗಿವೆ ಎಂದರು.
ಆಧುನಿಕ ಬದುಕಿನ ವೇಗದಲ್ಲಿ ಜನ ಮಾನಸದಲ್ಲಿ ಇರುವ ನಮ್ಮೂರಿನ ಹೆಸರಿನ (ಸ್ಥಳ ನಾಮಗಳ) ಇತಿಹಾಸವನ್ನೇ ಮರೆಯುತ್ತಿದ್ದೇವೆ. ಇಂತಹ ಸಂದೀಗ್ದ ಪರಿಸ್ಥಿತಿಯಲ್ಲಿ ಸ್ಥಳ ನಾಮಗಳ ಇತಿಹಾಸದ ದಾಖಲೆ ಶ್ಲಾಘನೀಯವಾಗಿದೆ.ಆದರೆ ಸ್ಥಳ ನಾಮಗಳ ದಾಖಲೆಯ ಸಂದರ್ಭದಲ್ಲಿ ಹೇಳಿಕೆಯಾಗಿ ಬರೆಯದೆ ಹಲವಾರು ಆಯಾಮಗಳ ರೂಪದಲ್ಲಿ ಪರಿಶೀಲನೆ ಅಗತ್ಯವಿದೆ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಬೆಂಗಳೂರು ವಿಶ್ವ ವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕಿ ಡಾ.ಎಂ.ಜಮುನಾ ಮಾತನಾಡಿ, ಇತಿಹಾಸ ಪುಸ್ತಕ ಬರೆಯುವಲ್ಲಿ ಕ್ಷೇತ್ರಾಧ್ಯಯನವೇ ಪ್ರಮುಖವಾಗಿದೆ. ಪ್ರತಿ ಗ್ರಾಮಗಳ ಹೆಸರಿಗೂ ಒಂದೊಂದು ಇತಿಹಾದ ಹಿನ್ನೆಲೆ ಇರಲಿದೆ. ಆದರೆ ಬ್ರಿಟಿಷರ ಆಡಳಿತ ಪ್ರಾರಂಭವಾದ ನಂತರ ಅವರು ತಮ್ಮ ವ್ಯಾಪಾರದ ದೃಷ್ಠಿಯಿಂದ ಅನುಕೂಲಕ್ಕೆ ತಕ್ಕಂತೆ ಸ್ಥಳ ನಾಮಗಳನ್ನು ಸೂಚಿಸುತ್ತ ಈ ಹಿಂದಿನ ಹೆಸರುಗಳನ್ನು ಅಳಿಸುತ್ತ ಹೋದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ಥಳನಾಮಗಳು ಪುಸ್ತಕದಲ್ಲಿನ ಮಾಹಿತಿಗಳು ಸತ್ಯಕ್ಕೆ ಹತ್ತಿರವಾಗಿದೆ. ಆದರೆ ಸ್ಥಳ ನಾಮಗಳ ಇತಿಹಾಸನವನ್ನು ಇದೇ ಅಂತಿಮ ಎಂದು ಹಳುವುದು ಕಷ್ಟವಾಗಲಿದೆ. ಅದು ಒಬ್ಬೊಬ್ಬರ ದೃಷ್ಠಿಕೋನ, ಅಧ್ಯಯನದ ವಿಧಾನದ ಮೇಲೂ ಅವಲಂಭಿಸಿರುತ್ತದೆ ಎಂದರು.
ಚಿಂತಕ ಯೋಗೇಶ್ವರ ಮಾಸ್ಟರ್ ಮಾತನಾಡಿ, ಇತಿಹಾಸ, ಸಮಾಜ ವಿಜ್ಞಾನ ಸೇರಿದಂತೆ ಎಲ್ಲಾ ರೀತಿಯ ಅಧ್ಯಯನಗಳು ಸಹ ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವಾಗಬೇಕು. ಅದು ವಿಶ್ವ ವಿದ್ಯಾಲಯಗಳಲ್ಲಿನ ಭೌದಿಕ ವಲಯಕ್ಕೆ ಮಾತ್ರ ಸೀಮಿತವಾಗಬಾರದು. ವಿಜ್ಞಾನದ ಅಧ್ಯಯನಗಳು ಹೇಗೆ ಜನಸಾಮಾನ್ಯರಿಗೆ ತಲುಪುವ ಅಮೂಲಕ ಅವರು ಬಳಕೆಗೆ ಬರುತ್ತವೋ ಅದೇ ಮಾದರಿಯಲ್ಲಿ ಇತರೆ ಸಾಮಾಜ ವಿಜ್ಞಾನಗಳ ಸಂಶೋಧನೆ, ಅಧ್ಯಯನದ ಫಲಿತಾಂಶಗಳು ಜನ ಸಾಮಾನ್ಯರ ಬದುಕಿಗೆ ಬಳಕೆಗೆ ಬರುವಂತಾಗಬೇಕು. ನಾವು ವೈಜ್ಞಾನಿಕತೆಯಲ್ಲಿ ಮುಂದುವರೆದಿದ್ದೇವೆ. ಆದರೆ ವೈಚಾರಿಕತೆಯಲ್ಲಿ ಹಿಂದುಳಿದ್ದೇವೆ. ಸ್ಥಳ ನಾಮಗಳ ಕುರಿತು ಬರೆಯುವಾಗ ಜನಪದರಲ್ಲಿನ ಕತೆಗಳಲ್ಲಿರುವ ಸಂಗತಿಗಳನ್ನು ವಿಶ್ಲೇಷಣೆಗೆ ಒಳಪಡಿಸಿಕೊಳ್ಳಬೇಕು. ನಾವು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಬದುಕುತ್ತಿರುವುದರಿಂದ ಬಾಳುವವರ ಆದ್ಯತೆಗೆ ಪ್ರಾಮುಖ್ಯತೆ ನೀಡಬೇಕಿದೆ ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ಥಳನಾಮಗಳು ಪುಸ್ತಕದ ಲೇಖಕ ಡಾ.ಎಸ್.ವೆಂಕಟೇಶ್ ಮಾತನಾಡಿ, ನಾನು ಬರೆದಿರುವುದೇ ಅಂತಿಮವಲ್ಲ. ನನ್ನ ಗ್ರಹಿಕೆಗೆ ಬಂದಿರುವ ಸಂಗತಿಗಳನ್ನು ಅಧ್ಯಯನದ ಮೂಲಕ ಓದುಗರ ಮುಂದಿಡಲಾಗಿದೆ ಅಷ್ಟೇ ಎಂದರು.
ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಶಾಸನತಜ್ಞ ಡಾ. ಎಚ್.ಎಸ್.ಗೋಪಾಲರಾವ್ ವಹಿಸಿದ್ದರು. ಸಮಾರಂಭದಲ್ಲಿ ಚಿತ್ರ ಸಾಹಿತಿ ಜಗನ್ನಾಥ್ ಪ್ರಕಾಶ್, ಶಾಸನ ತಜ್ಞ ನರಸಿಂಹಮೂರ್ತಿ ಇದ್ದರು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……