ದೊಡ್ಡಬಳ್ಳಾಪುರ: ರಸ್ತೆಯನ್ನು ದುರಸ್ತಿ ಮಾಡದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ರಸ್ತೆಯಲ್ಲಿ ಭತ್ತದ ಪೈರು ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತಾಲೂಕಿನ ಹಾದ್ರಿಪುರ – ಮುಪ್ಪಡಿಘಟ್ಟ ನಡುವಿನ ರಸ್ತೆಯಲ್ಲಿ ನಡೆದಿದೆ.
ಈ ವೇಳೆ ಮಾತನಾಡಿದ ಕಾಡನೂರು ಗ್ರಾಮಪಂಚಾಯಿತಿ ಸದಸ್ಯ ಎನ್.ಆರ್.ಮನು, ಕಾಡನೂರು ಗ್ರಾಮಕ್ಕೆ ಹಾದ್ರಿಪುರ ಗ್ರಾಮದಿಂದ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಮಳೆ ಬಂದರೆ ಸಾಕು ಹಳ್ಳಕೊಳ್ಳದಂತಿರುವ ಈ ಕೆಸರಿನಂತ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ.ಮಕ್ಕಳು ವೃದ್ಧರು, ಮಹಿಳೆಯರು ಜಾರು ಬಿದ್ದು, ಎದ್ದ ಪ್ರಸಂಗಗಳು ನಿತ್ಯದ ಗೋಳಾಗಿದೆ. ಈಗಾಗಲೇ ಸಾಕಷ್ಟು ಮಂದಿ ಸ್ಥಳೀಯರು ಶಾಸಕ ಹಾಗೂ ಅಧಿಕಾರಿಗಳಿಗೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ.
ಈ ರಸ್ತೆ ಅವ್ಯವಸ್ಥೆಯಿಂದ ಬೆಂಗಳೂರಿನಿಂದ ಬರುತ್ತಿದ್ದ, ಸಾರಿಗೆ ಬಸ್ ಸಹ ನಿಂತುಹೋಗಿದ್ದು, ಇಲ್ಲಿನ ಗ್ರಾಮಸ್ಥರು ಪರದಾಡುವಂತಾಗಿದೆ.
ಸುಮಾರು 10ವರ್ಷಗಳ ಹಿಂದೆ ಈ ರಸ್ತೆ ಕಾಮಗಾರಿ ಕಂಡಿದ್ದು, ನಂತರ ಹಾಳುಬಿದ್ದಂತಾದ ಪರಿಣಾಮ ಹಾದ್ರಿಪುರ. ನರಸಯ್ಯನ ಅಗ್ರಹಾರ ಮುಪ್ಪಡಿಗಟ್ಟ, ಕಾಡನೂರು ಗ್ರಾಮಸ್ಥರು ತೀವ್ರ ಸಂಕಷ್ಟ ಅನುಭವಿಸುವಂತ್ತಿದ್ದಾರೆ.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಕಾಮಗಾರಿ ನಡೆಸಬೇಕಿದೆ. ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ಶಾಸಕ ವೆಂಕಟರಮಣಯ್ಯರಿಗೆ ಈ ಭಾಗದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಾದ್ರಿಪುರ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್, ಮಾಜಿ ಸದಸ್ಯ ಸತ್ಯನಾರಾಯಣ, ಹಾದ್ರಿಪುರ, ನರಸಯ್ಯನ ಅಗ್ರಹಾರದ ಗ್ರಾಮಸ್ಥರಾದ ರಾಜಣ್ಣ, ಲೋಕೇಶ್ ವೆಂಕಟೇಶ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…