ದೊಡ್ಡಬಳ್ಳಾಪುರ: ಶುಕ್ರವಾರ ರಾತ್ರಿ ಹಾಗೂ ಶನಿವಾರ ತಾಲೂಕಿನಾಧ್ಯಂತ ವರುಣ ಅಬ್ಬರಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಬೆಳ್ಳಂಬೆಳಗ್ಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಉದ್ಯೋಗಿಗಳು, ವಿದ್ಯಾರ್ಥಿಗಳು, ವ್ಯಾಪಾರಿಗಳು ಸೇರಿದಂತೆ ಅನೇಕರು ಶಾಲೆ, ವ್ಯಾಪಾರ, ವಹಿವಾಟು, ಉದ್ಯೋಗ ಮತ್ತಿತರ ಚಟುವಟಿಕೆಗಳಿಗೆ ತೆರಳಲು ತೊಡಕುಂಟಾಯಿತು.
ಸತತ ಮಳೆಯಿಂದ ಹಲವೆಡೆ ವಿದ್ಯುತ್ ಕಡಿತ ಉಂಟಾಗಿದ್ದು, 12ಗಂಟೆಯ ನಂತರ ಮಳೆಗೆ ಬಿಡುವು ದೊರೆತಿದೆಯಾದರು, ಕೆಲವೆಡೆ ತುಂತುರು ಮಳೆ ಸುರಿಯುತ್ತಿದೆ.
ಮಳೆಯಲಿ ಮಿಂದು ಯುವಕರ ಸಂಭ್ರಮ: ಹಲವು ವರ್ಷಗಳ ನಂತರ ಸುರಿಯುತ್ತಿರುವ ಮಳೆಯಲ್ಲಿ ಯುವಕರು ಮಿಂದು ಸಂಭ್ರಮಿಸಿದ್ದು, ತುಂಬಿ ಹರಿಯುತ್ತಿದ್ದ ಹಳ್ಳಕೊಳ್ಳಗಳ ವಿಡಿಯೋ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದು, ತಾವೆ ಲೈವ್ ಮೂಲಕ ಗೆಳೆಯರಿಗೆ ಮಾಹಿತಿ ನೀಡುತ್ತಿದ್ದದ್ದು ಕಂಡು ಬಂತು. ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲೋಹಳ್ಳಿ ಪುನಿತ್ ಗೌಡ ಫೇಸ್‌ಬುಕ್ ಮೂಲಕ ಮಳೆಯ ಮಾಹಿತಿ ನೀಡಿದ್ದು ವೈರಲ್ ಆಗಿದೆ.
31.02 ಮಿಮೀ ಮಳೆ ದಾಖಲು: ಶುಕ್ರವಾರದ ವರದಿಯಂತೆ ತಾಲೂಕಿನಲ್ಲಿ ಸರಾಸರಿ 31.02 ಮಿಮೀ ಮಳೆಯಾಗಿದೆ. ಹೋಬಳಿವಾರು ವರದಿಯನ್ವಯ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು 52.08 ಮಿಮೀ, ದೊಡ್ಡಬೆಳವಂಗಲ ಹೋಬಳಿಯಲ್ಲಿ 26.04 ಮಿಮೀ, ಮಧುರೆ ಹೋಬಳಿಯಲ್ಲಿ 21.04 ಮಿಮೀ, ಸಾಸಲು ಹೋಬಳಿಯಲ್ಲಿ 14.05 ಮಿಮೀ ಹಾಗೂ ತೂಬಗೆರೆ ಹೋಬಳಿಯಲ್ಲಿ 40.05 ಮಿಮೀ ಮಳೆ ದಾಖಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಸುಶೀಲಮ್ಮ ಹರಿತಲೇಖನಿಗೆ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……..