ಬೆಂಗಳೂರು: ಕನ್ನಡ ಬೆಳ್ಳಿತೆರೆ ಕಂಡಂಥಹಾ ಅಪ್ರತಿಮ ಹಾಸ್ಯನಟರಲ್ಲಿ ಒಬ್ಬರಾಗಿದ್ದ ದಿ.ಎನ್.ಎಸ್.ರಾವ್ ಅವರು ರಂಗಭೂಮಿಗಾಗಿಯೇ ತಮ್ಮ ಇಡೀ ಜೀವನ ಸವೆಸಿದರು ಎಂದು ನೀರಾವರಿ ನಿಗಮಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಶಂಕರ್.ಎಸ್.ಎನ್ ಅವರು ಹೇಳಿದರು.
ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ ಏರ್ಪಡಿಸಿದ್ದ ಐದು ದಿನಗಳ ಎನ್.ಎಸ್.ರಾವ್ ವಿರಚಿತ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಾಟಕಗಳು ನಮ್ಮೆಲ್ಲರ ಬಾಳಲ್ಲಿ ಹಾಸುಹೊಕ್ಕಾಗಿದ್ದು ಇಂದಿನ ಶಾಲಾ ಮಕ್ಕಳಿಗೂ ನಾಟಕಗಳನ್ನು ಹೇಳಿಕೊಡುವ ಅಧ್ಯಯನ ಶಿಬಿರಗಳು ನಡೆಯಬೇಕು ಎಂದು ಕರೆ ನೀಡಿದರು.
ಕನ್ನಡ ಸಿನಿಮಾ ರಂಗ ಕಂಡಂಥಹ ಅಪ್ರತಿಮ ಹಾಸ್ಯನಟರಲ್ಲಿ ಮೊದಲಿಗರು ನರಸಿಂಹರಾಜು, ಎರಡನೇಯವರು ಬಾಲಕೃಷ್ಣ ಮತ್ತು ಮೂರನೇಯವರು ಮುಸುರಿ ಕೃಷ್ಣಮೂರ್ತಿ, ಇಂಥಹಾ ದಿಗ್ಗಜರ ಸಾಲಿಗೆ ಸೇರುವ ಮತ್ತೊಂದು ಹೆಸರೇ ಎನ್.ಎಸ್.ರಾವ್.
ಬೆಳ್ಳಿತೆರೆಯ ಇತರೆ ಹಾಸ್ಯನಟರು ಕಣ್ಮರೆಯಾದಾಗ ಓಯಸೀಸ್ ಥರ ಬಂದವರು ಎನ್.ಎಸ್.ರಾವ್. ಎನ್.ಎಸ್.ರಾವ್ ಮತ್ತು ಉಮಾಶ್ರೀ ಜೋಡಿ ತುಂಬಾ ಹೆಸರುವಾಸಿಯಾಗಿತ್ತು ಎಂದು ಮೆಲುಕು ಹಾಕಿದ ಶಂಕರ್ ಅವರು, ದ್ವಂದ್ವಾರ್ಥ ಶಬ್ಧ ಬಳಸಿ ಎನ್.ಎಸ್.ರಾವ್ ನಮ್ಮನ್ನೆಲ್ಲಾ ನಗಿಸುತ್ತಿದ್ದರು ಆದರೆ ತೆರೆಯ ಹಿಂದೆ ತುಂಬಾ ಕಷ್ಟದ, ನೋವಿನ ದಿನಗಳನ್ನು ಕಂಡಿದ್ದಾರೆ. ಆದರೂ ಆ ನೋವಿನ ಮಧ್ಯೆಯೂ ಒಳ್ಳೆಯ ನಾಟಕಗಳನ್ನು ನೀಡಿದ್ದಾರೆ ಎಂದರು.
ನಾಟಕೋತ್ಸವದಲ್ಲಿ ರಂಗಕರ್ಮಿ ವಿದ್ಯಾರಣ್ಯ, ಡಾ.ಗೋವಿಂದಯ್ಯ, ಸತ್ಯನಾರಾಯಣ, ಪ್ರೊ. ಜಯರಾಮ್, ಪತ್ರಕರ್ತ ಸುಧೀಂದ್ರ ರಾವ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……..