ಯಲಹಂಕ: ಗ್ರಾಮಪಂಚಾಯಿತಿಯಿಂದ ವರ್ಷಕ್ಕೊಂದು ಸರ್ಕಾರಿ ಶಾಲೆ ದತ್ತು ತೆಗೆದುಕೊಂಡು ಇಂಗ್ಲಿಷ್ ಕಲಿಕೆ ಸೇರಿದಂತೆ ಖಾಸಗಿ ಶಾಲೆಗೆ ಸಮನಾಗಿ ಸರ್ಕಾರಿ ಶಾಲೆಯನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮೇಗೌಡ ಹೇಳಿದರು.
ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಕ್ಕನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಇಂಗ್ಲೀಷ್ ಕಲಿಕಾ ಬುಕ್, ನೋಟ್‍ಬುಕ್, ಪೆನ್ ವಿತರಿಸಿ ಅವರು ಮಾತನಾಡಿದರು.
ಈ ವರ್ಷ ಗ್ರಾಮ ಪಂಚಾಯಿತಿಯಿಂದ ಸರ್ಕಾರಿ ಶಾಲೆ ಅಂಗನವಾಡಿ ಅಭಿವೃದ್ದಿಗೆ 5 ಲಕ್ಷದ 50ಸಾವಿರ ರೂ ಹಣವನ್ನು ನೀಡಲಾಗಿದ್ದು, ಚೊಕ್ಕನಹಳ್ಳಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಕಂಪ್ಯೂಟರ್ ಶಿಕ್ಷಣ, ಇಂಗ್ಲೀಷ್ ಕಲಿಕೆ ಸೇರಿದಂತೆ ಈ ವರ್ಷವೇ ಎಲ್ಲಾ ಸೌಲಭ್ಯ ಕಲ್ಪಿಸಲು ಗ್ರಾಮಪಂಚಾಯಿತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.
ಅರಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳ ಆಸ್ತಿಯನ್ನು ಇ-ಖಾತೆ ಮಾಡುವ ಮೂಲಕ ಡಿಜಲೀಕರಣ ಮಾಡಲಾಗುತ್ತಿದೆ ಎಂದು ತಿಮ್ಮೇಗೌಡ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಮಂಜುಳಮ್ಮ, ಚೊಕ್ಕನಹಳ್ಳಿ ಗ್ರಾಮದ ಮುಖಂಡರಾದ ರಮೇಶ್, ನಾಗೇಶ್, ಶಾಲೆಯ ಮುಖ್ಯ ಶಿಕ್ಷಕಿ ಶಾಹಿನ್ ತಾಜ್ ಮತ್ತಿತರರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….