ದೊಡ್ಡಬಳ್ಳಾಪುರ: ನಗರಸಭೆ ಆವರಣದಲ್ಲಿ ರೂ.4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಕಾರ್ಯಾಲಯಕ್ಕೆ ಭಾನುವಾರ ಬೆಂಗಳೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೂತನ ಕಾರ್ಯಾಲಯದಲ್ಲಿ ಕಚೇರಿ ಕೆಲಸಗಳಿಗೆ ಬರುವ ಸಾರ್ವಜನಿಕರು ಕುಳಿತುಕೊಳ್ಳಲು ಅಗತ್ಯ ಇರುವ ಕುರ್ಚಿ, ಕುಡಿಯುವ ನೀರು, ನೆರಳಿನ ಸೌಲಭ್ಯ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
ಸ್ಥಳೀಯ ಆಡಳಿತ ಸುಸೂತ್ರವಾಗಿ ನಡೆಯಲು ಕಾರ್ಯಾಲಯದ ಅಗತ್ಯವು ಮುಖ್ಯ. ಹೀಗಾಗಿ ನೂತನ ಕಾರ್ಯಾಲಯದಲ್ಲಿ ಸದಸ್ಯರು ಸಭೆ ನಡೆಸಲು, ಉತ್ತಮ ಪರಿಸರದಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಲು ಅಗತ್ಯ ಇರುವ ಗಾಳಿ, ಬೆಳಕಿನ ಸೌಲಭ್ಯಗಳು ಇವೆ. ಸದಸ್ಯರು ಸಾಮಾನ್ಯ ಸಭೆಗಳನ್ನು ನಡೆಸಲು ಅನುಕೂಲವಾಗುವಂತೆ ಮೈಕ್, ಎಸಿ, ಸೂಕ್ತ ಕುರ್ಚಿಗಳ ವ್ಯವಸ್ಥೆ ಸೇರಿದಂತೆ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಸೂಚಿಸಿದರು.
ನೂತನ ನಗರಸಭೆ ಕಾರ್ಯಾಲಯ ಉದ್ಘಾಟನೆ ಕುರಿತಂತೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಸದ್ಯದಲ್ಲೇ ದಿನಾಂಕ ನಿಗದಿಪಡಿಸಲಾಗುವುದು ಎಂದರು.
ಈ ವೇಳೆ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಟಿ.ಎಸ್.ಶಿವರಾಜ್, ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….