ಮೈಸೂರು: ಜಗತ್ತಿನಲ್ಲಿ ಅತ್ಯಂತ ದೊಡ್ಡ ಸೈನಿಕ ಪಡೆ ಇರುವಂತಹ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದ್ದರೂ ಸಹ ದೇಶದ ಆಂತರಿಕ ರಕ್ಷಣೆಯ ಜವಬ್ದಾರಿ ಪೊಲೀಸರ ಮೇಲಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ಜ್ಯೋತಿನಗರದ ಪೊಲೀಸ್ ತರಬೇತಿ ಶಾಲೆಯ ಮೈದಾನದಲ್ಲಿ ನಡೆದ 6ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಗಳ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದೇಶದಿಂದ ಆಕ್ರಮಣ ಮಾಡುವ ಶತ್ರುಗಳನ್ನು ದಮನ ಮಾಡಲು ಭಾರತೀಯ ಸೈನಿಕರು ಸನ್ನದ್ಧರಾಗಿದ್ದಾರೆ. ಹಾಗೇಯೇ ವಿವಿಧ ಧರ್ಮ, ಭಾಷೆ, ಪಂಥ ಹೊಂದಿರುವ ದೇಶದ ಆಂತರಿಕ ರಕ್ಷಣೆಯ ಜವಬ್ದಾರಿಯನ್ನು ಪೊಲೀಸ್ ಪಡೆಯು ಸವಾಲಾಗಿ ಸ್ವೀಕರಿಸಿದೆ ಎಂದರು.
ದೇಶದ ಆಂತರಿಕ ಭದ್ರತೆಯನ್ನು ಗಟ್ಟಿಗೊಳಿಸಿ ದೇಶದ ನಾಗರಿಕರ ಪ್ರಾಣ, ಸ್ವತ್ತು, ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಂತಹ ಹೊಣೆಗಾರಿಕೆಯನ್ನು ಪೊಲೀಸ್ ಇಲಾಖೆಯು ಮಾಡುತ್ತಿದೆ ಎಂದು ಹೇಳಿದರು.
ಪೊಲೀಸ್ ಎಂದಾಕ್ಷಾಣ ಗಂಡಸರು ಎನ್ನುವ ಪರಿಕಲ್ಪನೆ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಪೊಲೀಸ್ ಪಡೆಯಲ್ಲಿ ಮಹಿಳೆಯರನ್ನು ನೇಮಕ ಮಾಡಲು ಮುಂದಾಗಿದೆ. ಪೊಲೀಸ್ ಪಡೆಯಲ್ಲಿ ಶೇ.100ಕ್ಕೆ ಶೇ.25 ಭಾಗ ಮಹಿಳೆಯರು ಇರಬೇಕು. ಪ್ರಸ್ತುತ ಕರ್ನಾಟಕ ಪೊಲೀಸ್ ಪಡೆಯಲ್ಲಿ ಶೇ.10ರಷ್ಟು ಮಹಿಳಾ ಪೊಲೀಸರು ಇದ್ದಾರೆ ಎಂದು ತಿಳಿಸಿದರು.
ಅಪರಾಧಿಗಳಿಗೆ, ಸಮಾಜಘಾತುಕರಿಗೆ ಪೊಲೀಸರು ಎಂದರೆ ಭಯ ಇರಬೇಕು. ಸಾಮಾನ್ಯ ಜನರಲ್ಲಿ ಪೊಲೀಸ್ ಎಂದರೆ ಭಯ ಇರಬಾರದು. ಸಾಮಾನ್ಯ ಜನರಲ್ಲಿ ಪೊಲೀಸ್ ಎಂದರೆ ರಕ್ಷಕರು, ಸ್ನೇಹಿತರು ಎನ್ನುವ ಭಾವನೆ ಇರಬೇಕು ಎಂದರು.
ನಾಗರಿಕ ಸ್ನೇಹಿಯಾಗಿ ಪೊಲೀಸರು ನಡೆದುಕೊಳ್ಳಬೇಕು. ರಾಜ್ಯದಲ್ಲಿ ಶೇ.35ರಷ್ಟು ಪ್ರಕರಣಗಳು ಮಹಿಳೆಯರು ಮತ್ತು ಮಕ್ಕಳ ಮೇಲಿನ ಪ್ರಕರಣಗಳದ್ದಾಗಿರುತ್ತದೆ. ಅನೇಕ ಸಂದರ್ಭದಲ್ಲಿ ಮಹಿಳೆ ದೂರು ಹೇಳಿಕೊಳ್ಳಲು ತನ್ನ ಎಲ್ಲಾ ನೋವನ್ನು ಹೇಳಿಕೊಳ್ಳಲು ಮುಜುಗರವಾಗುತ್ತದೆ. ಹೀಗಾಗಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕನಿಷ್ಠ 3 ಮಹಿಳಾ ಪೊಲೀಸರನ್ನು ನೇಮಿಸಲಾಗುತ್ತಿದೆ ಎಂದರು.
ಮಹಿಳೆಯರಿಗಾಗಿ 36 ಮಹಿಳಾ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುತ್ತಿದೆ. ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆ ಇದೆ. ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಹಲವಾರು ಕೆಲಸಗಳನ್ನು ಮಾಡಲಾಗುತ್ತಿದೆ. ವಿವಿಧ ಭಾಗದಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಹೆಣ್ಣಿನ ಮೇಲೆ ದೌರ್ಜನ್ಯ ನಡೆಸುವ ಕಿರಾತಕ ಮನಸ್ಸುಗಳಿವೆ. ಅಂತಹವರಿಂದ ಹೆಣ್ಣು ಮಕ್ಕಳ ರಕ್ಷಣೆಯ ಜವಾಬ್ದಾರಿ ಪೊಲೀಸರ ಮೇಲಿದೆ. ಮಹಿಳೆ ಮೇಲೆ ಅತ್ಯಾಚಾರ, ಹಲ್ಲೆ ನಡೆದಾಗ ಸಾಕ್ಷಿಗಳು ಲಭ್ಯವಿರುವುದಿಲ್ಲ. ಹೀಗಾಗಿ ಎಫ್.ಎಸ್.ಎಲ್ ಲ್ಯಾಬ್‌ಗಳನ್ನು ತೆರೆಯುವ ಮೂಲಕ 250 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಕೆ.ಪಿ.ಎ ನಿರ್ದೇಶಕರ ವಿಫುಲ್ ಕುಮಾರ್, ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ಧರಣೀದೇವಿ ಮಾಲಗತ್ತಿ ಸೇರಿದಂತೆ ಇತರರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……