ದೊಡ್ಡಬಳ್ಳಾಪುರ: ರೈತರಿದ್ದರೆ ಮಾತ್ರ ದೇಶ ಸಮೃದ್ಧವಾಗಿರುತ್ತದೆ. ಆದರೆ ರೈತರ ಪರ ಹೋರಾಟಗಳಿಗೆ ಯಾರೂ ಬರುವುದಿಲ್ಲ. ನ್ಯಾಯಯುತ ಹೋರಾಟಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಹೇಳಿದರು.
ನಗರದ ಬಮೂಲ್ ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಹಾಲು ಉತ್ಪಾದಕ ಸಹಕಾರ ಸಂಘಗಳ ನೌಕರರ ಸಂಘದ ನೂತನ ಕಾರ್ಯಕಾರಿ ಸಮಿತಿ ರಚನೆ ಹಾಗೂ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ 200ಕ್ಕೂ ಹೆಚ್ಚು ಕಾರ್ಯದರ್ಶಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯದರ್ಶಿಗಳು ಶಿಸ್ತುಬದ್ದವಾಗಿ ಕೆಲಸ ಮಾಡಿದಾಗ ಸಂಘಕ್ಕೆ ರೈತರಿಂದ ಹಾಲು ಪೂರೈಕೆ ಕ್ರಮೇಣವಾಗಿ ಹೆಚ್ಚಾಗುತ್ತದೆ. ಯಾವುದೇ ಹಾಲು ಕಲಬೆರಕೆ, ಸೋರಿಕೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ಕಾರ್ಯದರ್ಶಿಗಳು ಸ್ವಚ್ಚ ಆಡಳಿತ ನೀಡಿದಾಗ ಆಯಾ ಎಂಪಿಸಿಎಸ್ ಗಳು ಶೀಘ್ರವಾಗಿ ಅಭಿವೃದ್ಧಿಯಾಗುತ್ತದೆ. ತಾಲೂಕಿನ ಎಲ್ಲಾ ಎಂಪಿಸಿಎಸ್ ಗಳ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಗಳ ಅನುಕೂಲಕ್ಕಾಗಿ ನೂತನ ಹಾಲು ಉತ್ಪಾದಕರ ನೌಕರರ ಸಂಘ ಅಸ್ತಿತ್ವಕ್ಕೆ ತರಲಾಗುವುದು. ಸಂಘ ಕೇವಲ ನೌಕರರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಲಿದೆ. ಅನಾರೋಗ್ಯ, ಅಪಘಾತ, ಅತ್ಯಂತ ಅನಿವಾರ್ಯ ಸಂಧರ್ಬದಲ್ಲಿ ಆರ್ಥಿಕ ಸೌಲಭ್ಯ ನೀಡಲು ಸಂಘವು ಶ್ರಮಿಸಲಿದೆ. ಇದಕ್ಕಾಗಿ ಪ್ರತಿ ಎಂಪಿಸಿಎಸ್ ನಿಂದ ಪ್ರತಿ ತಿಂಗಳು ತಲಾ ಒಂದೂವರೆ ಸಾವಿರ ತೆಗೆದಿಡಲು ನಿರ್ಧರಿಸಲಾಗಿದೆ. ಎಂಪಿಸಿಎಸ್ ನ ಯಾವುದೇ ಸಿಬ್ಬಂದಿ ಸಮಸ್ಯೆಯಲ್ಲಿದ್ದಾಗ ನೇರವಾಗಿ ನನ್ನ ಭೇಟಿಯಾಗಿ ತಿಳಿಸಿದರೆ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.
ನೂತನ ಸಂಘಕ್ಕೆ 10ಲಕ್ಷ ರೂ: ನೂತನ ತಾಲೂಕು ಹಾಲು ಉತ್ಪಾದಕರ ಸಹಕಾರ ನೌಕರರ ಸಂಘದ ನಿಧಿಗೆ ವೈಯಕ್ತಿಕವಾಗಿ 10 ಲಕ್ಷ ರೂ. ನೀಡಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ಈ ನಿಧಿಯನ್ನು ಒಂದು ಕೋಟಿ ರೂ.ಗೆ ಏರಿಸಿ ಸಂಘದ ನೌಕರರ ಕ್ಷೇಮಾಭಿವೃದ್ಧಿಗೆ ಬಳಕೆ ಮಾಡಲು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರೋತ್ಸಾಹ ಧನ, ಪ್ರಶಸ್ತಿ, ಸನ್ಮಾನ: ಹೈನುಗಾರಿಕೆ ಮತ್ತು ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾಲೂಕು ಅತ್ಯುತ್ತಮ ಹಾಲು ಉತ್ಪಾದಕ ಸಹಕಾರ ಸಂಘ ಪ್ರ ಅತ್ಯುತ್ತಮ ಹಾಲು ಉತ್ಪಾದಕ ರೈತ, ಅತ್ಯುತ್ತಮ ಕಾರ್ಯದರ್ಶಿಗಳಿಗೆ ಪ್ರೋತ್ಸಾಹಧನ ನೀಡಿ ಅಭಿನಂದನೆ ಸಲ್ಲಿಸಲಾಯಿತು.
ನೌಕರರ ಬೇಡಿಕೆ: ಇದೇ ವೇಳೆ ನೌಕರರ ಸಂಘದ ಅಧ್ಯಕ್ಷ ರುದ್ರಪ್ಪ ಮಾತನಾಡಿ ಕನಿಷ್ಠ 15 ವರ್ಷಗಳ ಕಾಲ ಸೇವೆ ಮಾಡಿ ವಯೋಸಹಜ, ಅಪಘಾತ, ಹೀಗೆ ಸೂಕ್ತ ಕಾರಣಗಳಿಂದ ನಿವೃತ್ತಿಯಾದವರಿಗೆ ಮತ್ತು ಅಕಾಲಿಕ ಮರಣ ಹೊಂದಿದವರಿಗೆ 10 ಲಕ್ಷ ಪರಿಹಾರ ಧನ ಮತ್ತು ವೇತನ ಹೆಚ್ಚಳವಾಗಿ ಮೂರು ವರ್ಷವಾಗಿದೆ ಶೀಘ್ರವಾಗಿ ವೇತನ ಹೆಚ್ಚಳ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಹಾಲು ಉತ್ಪಾದಕರ ನೌಕರರ ಸಂಘದ ಅಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ರಾಜಕುಮಾರ್, ಪ್ರಧಾನಕಾರ್ಯದರ್ಶಿ ನಾರಾಯಣಪ್ಪ, ಖಜಾಂಚಿ ಆರ್.ಸತೀಶ್, ಎಂಪಿಸಿಎಸ್ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……