ಹಾವೇರಿ: ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಪ್ರಿಮಿಯಂ ಮೊತ್ತದ ವ್ಯತ್ಯಾಸದ ಪರಿಹಾರ ಹಣ ರೂ.21,916ಗಳನ್ನು 30 ದಿನದೊಳಗಾಗಿ ರೈತನಿಗೆ ಪಾವತಿಸುವಂತೆ ಶಿರಸಿ ಐ.ಸಿ.ಐ.ಸಿ.ಐ ಬ್ಯಾಂಕ್ ಶಾಖೆಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಹಾನಗಲ್ ತಾಲೂಕು ಹೇರೂರ ಗ್ರಾಮದ ಚಂದ್ರಗೌಡ ವಿರುಪಾಕ್ಷಪ್ಪ ಪಾಟೀಲ ಅವರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ತಮ್ಮ 3.23 ಎಕರೆ ಜಮೀನಲ್ಲಿ ಭತ್ತ(ನೀರಾವರಿ) ಬೆಳೆಯಲು 2017-18ರಲ್ಲಿ ಶಿರಸಿ ಐ.ಸಿ.ಐ.ಸಿ.ಐ ಬ್ಯಾಂಕ್ ಶಾಖೆಯಲ್ಲಿ ರೂ.6 ಲಕ್ಷ ಸಾಲ ಪಡೆದಿದ್ದರು. ಸಾಲದ ಹಣದಲ್ಲಿ ಬೆಳೆವಿಮೆ ಪ್ರೀಮಿಯಂ ಕಡಿತಮಾಡುವ ಸಂದರ್ಭದಲ್ಲಿ ನೀರಾವರಿ ಭತ್ತದ ಬದಲಾಗಿ ನೀರಾವರಿ ಗೋವಿನ ಜೋಳದ ಮೇಲೆ ಪ್ರೀಮಿಯಂ ಹಣ ಕಳುಹಿಸಿ ಸೇವಾ ನ್ಯೂನ್ಯತೆ ಎಸಗಿದ್ದರಿಂದ ಬೆಳೆವಿಮಾ ಪರಿಹಾರ ಮೊತ್ತ ರೂ.23,978.24 ಪಡೆಯಲು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಸುನಂದಾ ಹಾಗೂ ಸದಸ್ಯರಾದ ಮಹೇಶ್ವರಿ ಬಿ.ಎಸ್. ಅವರು ಅಂಕಿ ಸಂಖ್ಯಾ ಶಾಸ್ತ್ರ ಇಲಾಖೆ ಪ್ರಕಾರ ಶೇ.28.30ರಷ್ಟು ಬೆಳೆ ಹಾನಿ ಪ್ರಕಾರ ರೂ.21,916/-, ಪ್ರಕರಣದ ಖರ್ಚು ರೂ. ಒಂದು ಸಾವಿರ ಹಾಗೂ ಮಾನಸಿಕ ಮತ್ತು ದೈಹಿಕ ತೊಂದರೆಗಾಗಿ ರೂ.ಎರಡು ಸಾವಿರ ಪಾವತಿಸಲು ಆದೇಶ ಹೊರಡಿಸಿದ್ದಾರೆ.
ಆದೇಶವಾದ 30 ದಿನಗಳಲ್ಲಿ ಮೊತ್ತ ಪಾವತಿಸಲು ವಿಫಲವಾದರೆ ವಾರ್ಷಿಕ ಶೇ.9ರ ಬಡ್ಡಿ ಸಮೇತ ಪಾವತಿಸಬೇಕು ಎಂದು ಆದೇಶಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ನೋಂದಣಾಧಿಕಾರಿ ಹಾಗೂ ಸಹಾಯಕ ಆಡಳಿತಾಧಿಕಾರಿ ಕರಿಯಪ್ಪ ಬಡಪ್ಪಳವರ ಅವರು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..