ದೊಡ್ಡಬಳ್ಳಾಫುರ: ನಗರ ಹಾಗೂ ತಾಲೂಕಿನ ವಿವಿಧ ಕಡೆ ಅನಧಿಕೃತವಾಗಿ ನಡೆಸುತ್ತಿರುವ ಮೆಡಿಕಲ್ ಸ್ಟೋರ್, ಕ್ಲಿನಿಕ್, ನರ್ಸಿಂಗ್ ಹೋಂಗಳಿಗೆ ಕಡಿವಾಣ ಹಾಕಬೇಕೆಂದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ಇಂದು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ತಾಲೂಕಿನಲ್ಲಿ ಯಾವುದೇ ಪರವಾನಗಿ ಪಡೆಯದೆ ನಾಯಿಕೊಡೆಗಳಂತೆ ನರ್ಸಿಂಗ್ ಹೋಂ, ಕ್ಲಿನಿಕ್‌ಗಳು, ಮೆಡಿಕಲ್ ಸ್ಟೋರ್‌ಗಳನ್ನು ನಡೆಸಲಾಗುತ್ತಿದೆ. ಜತೆಗೆ, ನರ್ಸಿಂಗ್ ಹೋಂಗಳಲ್ಲಿ ವೈದ್ಯಕೀಯ ಸರ್ಟಿಫಿಕೇಟ್‌ಗಳನ್ನು ಪಡೆದುಕೊಂಡು ನಕಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಡಿಫಾರ್ಮ್ ಪಡೆಯದೇ ಕೆಲವರು ಮೆಡಿಕಲ್ ಸ್ಟೋರ್‌ಗಳನ್ನು ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಹತ್ತಾರು ಮೆಡಿಕಲ್ ಸ್ಟೋರ್‌ಗಳು ಹಾಗೂ ಕ್ಲಿನಿಕ್‌ಗಳಲ್ಲಿ ವೈದ್ಯಕೀಯ ನಿಯಮಾವಳಿಗಳನ್ನು ಉಲ್ಲಂಘಿಸಲಾಗುತ್ತಿದೆ. ಕೆಪಿಎಂಇ ಕಾಯಿದೆಯೂ ಉಲ್ಲಂಘಿಸಿ ಅನಧಿಕೃತವಾಗಿ ನಡೆಸಲಾಗುತ್ತಿದ್ದಲ್ಲದೆ, ಗರ್ಭನಿರೋಧಕ ಮಾತ್ರೆಗಳು, ಸ್ಟಿರಾಯಿಡ್, ನೋವು ನಿವಾರಗಳನ್ನು ಮಾರಾಟ ಮಾಡಲಾಗುತ್ತಿದೆ. ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು, ಔಷಧ ನಿಯಂತ್ರಕರು ಹಾಗೂ ಇತರೆ ಸಕ್ಷಮ ಪ್ರಾಧಿಕಾರಗಳು ಯಾವುದೇ ಕ್ರಮ ಜರುಗಿಸದೇ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್ ಮಾತನಾಡಿ, ನಗರದಲ್ಲಿ ನಡೆಯುತ್ತಿರುವ ನರ್ಸಿಂಗ್ ಹೋಂ, ಕ್ಲಿನಿಕ್, ಮೆಡಿಕಲ್ ಸ್ಟೋರ್‌ಗಳ ಅಕ್ರಮಗಳು ಅವ್ಯಾಹತವಾಗಿ ಮುಂದುವರಿಯುತ್ತಿದ್ದರೂ ಅಧಿಕಾರಿಗಳು ಮೌನವಾಗಿರುವುದರ ಹಿಂದಿನ ಉದ್ದೇಶಗಳೇನು…? ನಕಲಿ ಸರ್ಟಿಫಿಕೇಟ್ ಪಡೆದು ನಡೆಯುತ್ತಿರುವ ಮೆಡಿಕಲ್ ದಂಧೆಗೆ ಅಧಿಕಾರಿಗಳ ಕುಮ್ಮಕ್ಕು ಇದೆಯೇ ಅದನ್ನಾದರೂ ತಿಳಿಸಿ ಎಂದು ಅಸಮಾಧಾನ ಹೊರಹಾಕಿದರು.
ನಗರಾಧ್ಯಕ್ಷ ಶ್ರೀನಗರ ಬಶೀರ್ ಮಾತನಾಡಿ, ವೈದ್ಯರೆಂದರೆ ಡಾ.ವೆಂಕಟರೆಡ್ಡಿ ತಾಲೂಕಿಗೆ ಮಾದರಿ ವ್ಯಕ್ತಿಯಾಗಿದ್ದಾರೆ. ಅಂತಹವರಿದ್ದ ತಾಲೂಕಿನಲ್ಲಿ ವೈದ್ಯಕೀಯ ಕ್ಷೇತ್ರ ಕಲ್ಮಷಗೊಳ್ಳುತ್ತಿದೆ. ಅನಧಿಕೃತವಾಗಿ ತೆರೆದಿರುವ ಮೆಡಿಕಲ್ ಸ್ಟೊರ್ ಗಳ ಪಕ್ಕದಲ್ಲಿ ಅನಧಿಕೃತ ಡಾಕ್ಟರ್ ಗಳನ್ನು ತಂದಿಟ್ಟು ಸಾಮನ್ಯ ಜನರ ಜೀವನದ ಜೊತೆ ಚಲ್ಲಾಟವಾಡುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
15 ದಿನಗಳೊಳಗಾಗಿ ಕ್ರಮ: ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ, ತಹಶೀಲ್ದಾರ್ ಟಿ.ಎಸ್.ಶಿವರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ಹಾಗೂ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಓಂಕಾರಯ್ಯ ಭೇಟಿ ಮನವಿ ಪತ್ರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ, ತಹಶೀಲ್ದಾರ್ ಟಿ.ಎಸ್.ಶಿವರಾಜ್, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಹೋರಾಟಗಾರರ ಪ್ರತಿಭಟನೆ ಪ್ರಶಂಸನೀಯವಾಗಿದ್ದು, 15 ದಿನಗಳ ಒಳಗಾಗಿ ತಾಲೂಕಿನಲ್ಲಿನ ಅನಧಿಕೃತ ವೈದ್ಯಕೀಯ ಸಂಬಂಧಿಸಿದ ಕೇಂದ್ರಗಳನ್ನು ಬಾಗಿಲು ಮುಚ್ಚಿದಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಉತ್ತರಿಸಿದ ಪ್ರತಿಭಟನಾ ನಿರತರು 15 ದಿನಗಳ ಒಳಗೆ ಅಕ್ರಮವಾಗಿ ನಡೆಯುತ್ತಿರುವ ದಂಧೆಗೆ ಕಡಿವಾಣ ಹಾಕದೆ ಹೋದರೆ ನಾವು ರಸ್ತೆಗಿಳಿದು ಉಗ್ರವಾಗ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿ, ಅನಿರ್ದಿಷ್ಟಾವಧಿ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಕರವೇ ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್ ವೇಣು, ಖಜಾಂಚಿ ಆನಂದ್, ಕಾನೂನು ಸಲಹೆಗಾರರು ಮಲ್ಲತಳ್ಳಿ ಅನಂದಕುಮಾರ್, ಜೋಗಳ್ಳಿ ಅಮ್ಮು, ಕಾರ್ಮಿಕ ಘಟಕದ ಅಧ್ಯಕ್ಷ ಆರ್.ಬಿ.ಮಹೇಶ್, ಗೌರವಾಧ್ಯಕ್ಷ ಪು.ಮಹೇಶ್, ಕೆ.ಆರ್.ಮಂಜುನಾಥ್, ನಗರ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಮುಖಂಡರಾದ ಸೂರಿ, ರವಿ, ಕೆಂಪೇಗೌಡ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..