ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಧರಣಿ 10 ತಿಂಗಳು ಪೂರೈಸಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ರೀತಿಯಿಂದಲು ಸ್ಪಂಧಿಸುತ್ತಿಲ್ಲ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಕೈಬಿಡುವಂತೆ ಸೆ.27 ರಂದು ನಡೆಯಲಿರುವ ಭಾರತ್ ಬಂದ್ ಅನ್ನು ಎಲ್ಲರು ಬೆಂಬಲಿಸುವಂತೆ ವಿವಿಧ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.
ನಗರದ ಕನ್ನಡ ಜಾಗೃತ ಭವನದಲ್ಲಿ ಮಂಗಳವಾರ ನಡೆದ ಭಾರತ್ ಬಂದ್ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮುಖಂಡರು ದೇಶದ ಕೃಷಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಇದುವರೆಗೂ ಯಾವುದೇ ರಾಜ್ಯ ಸರ್ಕಾರಗಳು ಜಾರಿಗೊಳಿಸಿಲ್ಲ. ಆದರೆ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಮಾತ್ರ ತರಾತುರಿಯಲ್ಲಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ರೈತ ವಿರೋಧಿ ಆಡಳಿತಕ್ಕೆ ಮುಂದಾಗಿದೆ. ಸದಸ್ಯದಲ್ಲೇ ಕೃಷಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಹಾಗೂ ನೇಕಾರರಿಗೆ ಸಬ್ಸಿಡಿದರದಲ್ಲಿ ನೀಡಲಾಗುತ್ತಿರುವ ವಿದ್ಯುತ್ ಎಲ್ಲವು ಸಹ ಸ್ಥಗಿತಗೊಳ್ಳಲಿವೆ. ವಿದ್ಯುತ್ ವಲಯ ಸಂಪೂರ್ಣವಾಗಿ ಖಾಸಗಿಯವರ ಪಾಲಾಗಲಿದೆ ಎಂದರು.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳಿಂದ ಕೇವಲ ರೈತರ ಬದುಕು ಮಾತ್ರ ಬೀದಿಗೆ ಬರುವುದಿಲ್ಲ.ಕೃಷಿಯನ್ನು ನಂಬಿ ಜೀವನ ನಡೆಸುತ್ತಿರುವ ಇತರರು ಸಹ ಜೀವನ ನಡೆಸುವುದು ಕಷ್ಟವಾಗಲಿದೆ.ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಬಂದ್ ಅನ್ನು ಜೆಡಿಎಸ್, ಕಾಂಗ್ರೆಸ್, ಕಾರ್ಮಿಕ ಸಂಘಟನೆಗಳು ಸೇರಿದಂತೆ ಎಲ್ಲರು ಬೆಂಬಲಸಬೇಕು ಎಂದು ಮನವಿ ಮಾಡಿದರು
ಸೆ.26 ಬೈಕ್ ರ್ಯಾಲಿ: ಭಾರತ್ ಬಂದ್ ಅಂಗವಾಗಿ ಸೆ.26 ರಂದು ನಗರದಲ್ಲಿ ಬೈಕ್ ರ್ಯಾಲಿ ನಡೆಯಲಿದೆ. ನಗರದ ಸಿದ್ದಲಿಂಗಯ್ಯ ವೃತ್ತದಿಂದ ಆರಂಭವಾಗುವ ಬೈಕ್ ರ್ಯಾಲಿ ಕೈಗಾರಿಕಾ ಪ್ರದೇಶ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಲಿದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಯ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..