ದೊಡ್ಡಬಳ್ಳಾಪುರ: ತಾಲೂಕಿನಾಧ್ಯಂತ 18 ವರ್ಷ ಮೇಲ್ಪಟ್ಟವರಿಗೆ ಸೆಪ್ಟೆಂಬರ್ 17ರಂದು ಆಯೋಜಿಸಲಾಗಿರುವ ಕೋವಿಡ್-19 ವಿಶೇಷ ಲಸಿಕಾ ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ತಾಲೂಕಿಲ್ಲಿ ನಾಲ್ಕು ಸಾವಿರಕ್ಕು ಹೆಚ್ಚು ಲಸಿಕೆ ನೀಡಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿಗೆ ಜಿಲ್ಲಾಧಿಕಾರಿ 30 ಸಾವಿರ ಲಸಿಕೆ ಗುರಿ ನೀಡಿದ್ದರೂ, ತಾಲೂಕು ಆಡಳಿತ 40,000, ಗುರಿಯನ್ನು ಹೊಂದಲಾಗಿದ್ದು, ತಾಲೂಕು ಆಡಳಿತ, ಆರೋಗ್ಯ ಇಲಾಖೆ, ತಾಲೂಕು ಪಂಚಾಯಿತಿ, ಗ್ರಾಮಪಂಚಾಯಿತಿ ಮತ್ತಿತರ ಇಲಾಖೆಗಳ ಸಹಯೋಗದೊಂದಿಗೆ ಬೆಳಗ್ಗೆಯಿಂದಲೂ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ.
ನಾಗರೀಕರು ಲಸಿಕೆಯನ್ನು ಪಡೆಯಲು ಸಹಕಾರಿಯಾಗುವಂತೆ ಅವರ ಗ್ರಾಮ ಮಟ್ಟಗಳಲ್ಲಿ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಗಳಲ್ಲಿಯೇ ಲಸಿಕಾಕರಣದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆದ್ಯತೆಯುಳ್ಳ ಗುಂಪುಗಳಾದ ಕೈಗಾರಿಕಾ ವಸಾಹತು, ಕೊಳಗೇರಿ ಪ್ರದೇಶಗಳು, ಆಪಾರ್ಟ್ಮೆಂಟ್ಸ್ ಗಳು, ಕಟ್ಟಡ ಕಾಮಗಾರಿ ಸ್ಥಳಗಳು, ಅಲೆಮಾರಿ ಗುಂಪುಗಳು, 18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಕ್ಯಾಬ್ ಡ್ರೈವರ್ ಗಳು, ಹೋಟಲ್ ಸಿಬ್ಬಂದಿಗಳು, ಗಾರ್ಮೆಂಟ್ಸ್ ನೌಕರರು ಹಾಗೂ ಇತರೆ ಎಲ್ಲಾ ಅರ್ಹ ನಾಗರೀಕರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಹಳ್ಳಿಗಳಲ್ಲಿ ಲಸಿಕಾಕರಣವನ್ನು ನಡೆಸಲಾಗುತ್ತಿದೆ.
ಲಸಿಕೆ ಪಡೆಯದೆ ಇದ್ದ ಯುವ ಸಮುದಾಯದ ಬಹುತೇಕರು ಪ್ರಧಾನಿ ಮೋದಿ ಜನ್ಮದಿನದ ಕಾರಣವೇ ಲಸಿಕೆ ಪಡೆಯುತ್ತಿದ್ದೇವೆ ಎಂದು ಸಂಭ್ರಮಿತರಾಗಿದ್ದರು.
ಈ ಕುರಿತು ಹರಿತಲೇಖನಿಗೆ ಪ್ರತಿಕ್ರಿಯೆ ನೀಡಿದ ರಾಮಚಂದ್ರ, ಭೀತಿಯಿಂದ ಲಸಿಕೆ ಪಡೆದಿರಲಿಲ್ಲ. ಇಂದು ದೇಶದ ಹೆಮ್ಮೆಯ ಪ್ರಧಾನಿ ಮೋದಿ ಜನ್ಮದಿನದ ಕಾರಣ ಲಸಿಕೆ ಪಡೆಯಲು ಮುಂದಾಗಿದ್ದು, ಸಂತೋಷವಾಗುತ್ತಿದೆ ಎಂದರು.
ತಾಲುಕಿನ ಆರೂಢಿ ಗ್ರಾಮಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ವಿಶೇಷ ಕೋವಿಡ್-19 ಲಸಿಕಾ ಮೇಳಕ್ಕೆ ಅಧ್ಯಕ್ಷೆ ಜಯಮ್ಮ ಪ್ರಭು ಚಾಲನೆ ನೀಡಿದರು. ಈ ವೇಳೆ ಪಿಡಿಒ ಸೌಭಾಗ್ಯಮ್ಮ, ಸದಸ್ಯ ತಿಪ್ಪರಾಜ್, ಆರೋಗ್ಯ ಇಲಾಖೆಯ ರಾಜಮ್ಮ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..