ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಹೋಬಳಿ ವ್ಯಾಪ್ತಿಯ ಪಚ್ಚಾರಲಹಳ್ಳಿ ಹಾಗೂ ಬನವತಿ ಬೆಟ್ಟಗಳಲ್ಲಿನ ಸರ್ಕಾರದ ಗೋಮಾಳ ಅಕ್ರಮ ಒತ್ತುವರಿ ಮಾಡಿಕೊಂಡಿರುವ ಸ್ಥಳವನ್ನು ತಹಶೀಲ್ದಾರ್ ಟಿ.ಎಸ್.ಶಿವರಾಜ್ ಪರಿಶೀಲನೆ ನಡೆಸಿ, ಒತ್ತುವರಿ ಕಾರ್ಯಕ್ಕೆ ತಡೆಯೊಡ್ಡಿದ್ದಾರೆ.
ಈ ವೇಳೆ ಹರಿತಲೇಖನಿಯೊಂದಿಗೆ ಮಾತನಾಡಿರುವ ಅವರು, ಆರೂಢಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 247 ಹಾಗೂ ಬನವತಿ ಸರ್ವೆ ನಂಬರ್ 292 ನಂಬರ್ ಗೆ ಸೇರಿದ ಬೆಟ್ಟದಲ್ಲಿನ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ನೆಲಸಮಗೊಳಿಸುತ್ತಿದ್ದಾರೆ ಎಂದು ಸ್ಥಳಿಯರಿಂದ ದೂರು ಬಂದಿರುವ ಕಾರಣ ಪರಿಶೀಲನೆ ನಡೆಸಲಾಗಿದೆ. ಈ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಲು ಗೋಮಾಳದಲ್ಲಿನ ಗಿಡಮರಗಳನ್ನು ತೆರವು ಮಾಡಿದ್ದಾರೆ.
ನೋಟೀಸ್: ಗೋಮಾಳ ಬೆಟ್ಟವನ್ನು ನೆಲಸಮಗೊಳಿಸಿದವರಿಗೆ ತಿಳುವಳಿಕೆ ನೋಟೀಸ್ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು. ಒತ್ತುವರಿ ಮಾಡದಂತೆ ಸೂಚನಾ ಫಲಕ ನೆಡಲಾಗುತ್ತಿದೆ. ಅಲ್ಲದೆ ಪರಿಸರ ಹಾನಿ ಕುರಿತಂತೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗುತ್ತಿದ್ದು, ನಿರಂತರವಾಗಿ ಈ ಪ್ರದೇಶದ ಮೇಲೆ ನಿಗಾವಹಿಸುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಶಿವರಾಜ್ ತಿಳಿಸಿದ್ದಾರೆ.
ಜೆಸಿಬಿ ಮಾಲಿಕರಿಗೆ ವಾರ್ನಿಂಗ್: ಸರ್ಕಾರಿ ಭೂಮಿ ಅಕ್ರಮ ಒತ್ತುವರಿ ತಡೆಗಟ್ಟಲು ಜೆಸಿಬಿ ಮಾಲೀಕರು, ಆರ್.ಟಿ.ಒ ಹಾಗೂ ಪೊಲೀಸ್ ಇಲಾಖೆ ಸಮ್ಮುಖದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಸರ್ಕಾರಿ ಭೂಮಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲು ಮುಂದಾಗುವ ಜೆಸಿಬಿ ಮಾಲೀಕರಿಗೆ ಕಟ್ಟು ನಿಟ್ಟುನ ಆದೇಶ ನೀಡಲು ಸಿದ್ದತೆ ನಡೆಸಲಾಗಿದೆ. ಆದೇಶ ಮೀರಿ ಸರ್ಕಾರಿ ಭೂಮಿಯಲ್ಲಿ ಕೆಲಸ ಮಾಡಿದರೆ ಜೆಸಿಬಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಂದಾಯ ಅಧಿಕಾರಿಗಳಿಗೆ ಮನವಿ: ಈ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನು ಉಳಿಸುವಂತೆ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳಿಗೆ ಕಳೆದ ಕೆಲ ದಿನಗಳ ಹಿಂದೆ ಮನವಿ ಸಲ್ಲಿಸಲಾಗಿತ್ತು.
ಪ್ರಶಂಸೆ: ಸ್ಥಳೀಯರ ಮನವಿಗೆ ಸ್ಪಂದಿಸಿ ಗೋಮಾಳ ರಕ್ಷಣೆಗೆ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಒತ್ತುವರಿ ತೆರವು ಕಾರ್ಯಕ್ಕೆ ಮುಂದಾಗಿರುವುದು ಪ್ರಶಂಸನೀಯ ಕಾರ್ಯವೆಂದು ಆರೂಢಿ ಗ್ರಾಮಪಂಚಾಯಿತಿ ಮಾಜಿ ಸದಸ್ಯ ರಾಜ್ ಕುಮಾರ್ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..