ದೊಡ್ಡಬಳ್ಳಾಪುರ: ಹಳೆಯ ಬಸ್ಪಾಸ್ ತೋರಿಸಿ ಸೆಪ್ಟೆಂಬರ್ 25ರವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ದೊಡ್ಡಬಳ್ಳಾಪುರ ಕೆಎಸ್ ಆರ್ ಟಿಸಿ ಡಿಪೋ ವ್ಯವಸ್ಥಾಪಕ ಆನಂದ್ ತಿಳಿಸಿದ್ದಾರೆ.
ಈ ಕುರಿತಂತೆ ಹರಿತಲೇಖನಿಗೆ ಮಾಹಿತಿ ನೀಡಿರುವ ಅವರು, ವಿದ್ಯಾರ್ಥಿಗಳಿಗೆ ಬಸ್ಪಾಸ್ಗಳನ್ನು ಪಡೆಯಲು ಹೆಚ್ಚಿನ ಕಾಲಾವಕಾಶ ನೀಡುವ ಉದ್ದೇಶದಿಂದ 2020-21ನೇ ಸಾಲಿನಲ್ಲಿ ಪಡೆದ ವಿದ್ಯಾರ್ಥಿ ಬಸ್ ಪಾಸ್ಗಳನ್ನು ಬಳಸಿ ಪ್ರಯಾಣಿಸಲು ಹಾಗೂ ಕಳೆದ ಸಾಲಿನಲ್ಲಿ ವಿದ್ಯಾರ್ಥಿ ಬಸ್ಪಾಸ್ಗಳನ್ನು ಪಡೆಯದೇ ಇರುವ ವಿದ್ಯಾರ್ಥಿಗಳು ಹೊಸದಾಗಿ ಶಾಲಾ / ಕಾಲೇಜುಗಳಲ್ಲಿ ಪಾವತಿಸಿರುವ ರಶೀದಿ ಹಾಗೂ ವಿದ್ಯಾ ಸಂಸ್ಥೆಯ ಗುರುತಿನ ಚೀಟಿಯೊಂದಿಗೆ ನಿಗಮದ ಬಸ್ಸುಗಳಲ್ಲಿ ಸಂಬಂಧಪಟ್ಟ ಮಾರ್ಗದಲ್ಲಿ ಅಥವಾ ಹೊಸ ವಿಳಾಸದಲ್ಲಿರುವ ಶಾಲಾ ಕಾಲೇಜು ಹಾಗೂ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಗಳಲ್ಲಿ 2021ರ ಸೆಪ್ಟೆಂಬರ್ 25 ರವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಈಗಾಗಲೇ ಹಲವಾರು ವಿದ್ಯಾರ್ಥಿಗಳು ಸೇವಾ ಸಿಂಧುವಿನ ಮೂಲಕ ಬಸ್ ಪಾಸ್ನ್ನು ಪಡೆಯುತ್ತಿದ್ದು, ಉಳಿದ ವಿದ್ಯಾರ್ಥಿಗಳು ಸಹ ವಿಳಂಬಕ್ಕೆ ಅವಕಾಶ ನೀಡದೇ ನಿಯಮಾನುಸಾರ ಉಚಿತ/ರಿಯಾಯಿತಿ ಪಾಸ್ಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಬಸ್ಪಾಸ್ಗಳನ್ನು ಪಡೆಯಬಹುದಾಗಿದೆ.
ಈ ಹಿಂದೆ 2020-21 ನೇ ಸಾಲಿನಲ್ಲಿ ಪಡೆದಿರುವ ವಿದ್ಯಾರ್ಥಿ ಬಸ್ಪಾಸ್ಗಳನ್ನು ಬಳಸಿ 2021ರ ಸೆಪ್ಟೆಂಬರ್ 15 ರವರೆಗೆ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು ಎಂದು ಆನಂದ್ ಅವರು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……