ದೊಡ್ಡಬಳ್ಳಾಪುರ: ತಾಲೂಕಿನಾಧ್ಯಂತ ಗೌರಿ ಹಬ್ಬವನ್ನು ಸರಳ ಹಾಗೂ ಸುಂದರವಾಗಿ ಆಚರಿಸಲಾಗುತ್ತಿದೆ. ಭಾದ್ರಪದ ಮಾಸದ ಚತುರ್ಥಿಯ ಹಿಂದಿನ ದಿನ ಬರುವ ಗೌರಿ ಹಬ್ಬ ಸುಮಂಗಲೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ. ಕನ್ನಡ ನಾಡಿನ ಈ ಬಹುದೊಡ್ಡ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಹಿಂದೂಗಳ ಆರಾಧ್ಯ ದೈವ ಗಣಪತಿ ಹಬ್ಬ ವಿಶೇಷವಾಗಿ ಯುವಕರ ಹಬ್ಬ. ಅದೇ ರೀತಿ ಹೆಣ್ಣು ಮಕ್ಕಳಿಗೆ ಗೌರಿಹಬ್ಬ ಅಚ್ಚುಮೆಚ್ಚಿನದು. ಈ ಎರಡು ಹಬ್ಬಗಳು ಒಟ್ಟಿಗೇ ಬರುವುದರಿಂದ ಇದರ ಸಂಭ್ರಮವೇ ಬೇರೆ ರೀತಿ ಇದೆ.
ಶುಕ್ರವಾರ ಗಣಪತಿ ಹಬ್ಬವಿದ್ದು, ಎಲ್ಲೆಡೆ ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಕರೊನಾ ಸಾಂಕ್ರಾಮಿಕ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಗೆ ರಾಜ್ಯದ ಜನತೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಸಾರ್ವಜನಿಕ ಗಣೇಶೋತ್ಸವಕ್ಕೆ ಅಳೆದು ತೂಗಿ ರಾಜ್ಯ ಸರ್ಕಾರ ಕೆಲ ಷರತ್ತು ವಿಧಿಸಿ ಆಚರಣೆಗೆ ಒಪ್ಪಿಗೆ ಸೂಚಿಸಿದೆ.
ಕೋರ್ಟ್ ರಸ್ತೆಯಲ್ಲಿ ಬಗೆಬಗೆಯ ವಿನ್ಯಾಸವುಳ್ಳ ಆಕರ್ಷಕ ಗಣಪತಿ ಮೂರ್ತಿಗಳನ್ನು ಕಲಾವಿದರು ಸಿದ್ಧಪಡಿಸಿದ್ದಾರೆ. ರಾಜ್ಯದ ವಿವಿಧೆಡೆ ಈಗಾಗಲೇ ಗಣಪತಿಗಳು ಮಾರುಕಟ್ಟೆಗೆ ಬಂದಿವೆ. ವಿವಿಧ ಭಂಗಿಯಲ್ಲಿರುವ ಗಣಪತಿಗಳು ನೋಡುಗರ ಮನಸೆಳೆಯುತ್ತಿವೆ.
ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಚೌತಿಯಂದು ಗಣೇಶ ಚತುರ್ಥಿ ಬರುತ್ತದೆ. ಅಂದಿನ ದಿನ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಕೋವಿಡ್-19 ಬಿಡುವಿನಿಂದ ಈ ವರ್ಷ ಗಣೇಶೋತ್ಸವ ಆಚರಣೆಗೆ ಭರ್ಜರಿಯಾಗಿರಲಿದೆ.
ಮನೆಗಳಲ್ಲೂ ಕೂಡ ಗಣೇಶ ಮತ್ತು ಗೌರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಟಪ ನಿರ್ಮಿಸಲಾಗಿದೆ. ಜೊತೆಗೆ ಚಕ್ಕಲಿ, ಕೋಡುಬಳೆ, ಕಡುಬು, ಉಂಡೆಗಳು, ಸಿಹಿ ತಿನಿಸುಗಳ ತಯಾರಿ ಕೂಡ ಭರ್ಜರಿಯಾಗಿಯೇ ನಡೆದಿದೆ.
ಈ ಬಾರಿ ಹಬ್ಬದ ಹಿನ್ನೆಲೆಯಲ್ಲಿ ತರಕಾರಿ, ಹಣ್ಣು, ಹೂಗಳ ಬೆಲೆಯಲ್ಲಿ ಅಂತಹ ವ್ಯತ್ಯಾಸವೇನೂ ಇರಲಿಲ್ಲ. ಹಬ್ಬದ ಹಿನ್ನೆಲೆಯಲ್ಲಿ ದೂರದ ಊರುಗಳಲ್ಲಿ ನೆಲೆಸಿರುವ ಸ್ಥಳೀಯರು ಊರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ರೈಲು, ಬಸ್ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಒದಗಿಸಿದೆ. ಒಟ್ಟಾರೆ ಈ ಬಾರಿ ಹಬ್ಬಕ್ಕೆ ಸಂಭ್ರಮದ ಸಿದ್ಧತೆ ನಡೆದಿದೆ.
ಗಣೇಶ ಮೂರ್ತಿ ವಿಸರ್ಜನೆಗೆ ನಗರಸಭೆ ವತಿಯಿಂದ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಮುಂಭಾಗದಲ್ಲಿನ ನಗರಕೆರೆಯಲ್ಲಿ ತಾತ್ಕಾಲಿಕ ವಿಸರ್ಜನೆಯ ಅವಕಾಶ ಕಲ್ಪಿಸಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..