ದೊಡ್ಡಬಳ್ಳಾಪುರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗುತ್ತಿದ್ದರು ಗೃಹಸಚಿವರು ಈ ಬಗ್ಗೆ ಸಣ್ಣ ಹೇಳಿಕೆಯನ್ನು ನೀಡಿಲ್ಲ, ಹೆಣ್ಣು ಮಕ್ಕಳ ಮೇಲೆ ನಡೆದ ದೌರ್ಜನ್ಯ ಘಟನೆ ಜಗಜ್ಜಾಹೀರಾದರೂ ಪೊಲೀಸರು ಯಾರನ್ನೂ ಬಂಧಿಸದೆ ಇರುವುದು ಖಂಡನಿಯ ಎಂದು ಪಿವಿಸಿ ರಾಜ್ಯ ಸಮಿತಿ ರಾಜ್ಯ ಅಧ್ಯಕ್ಷ ಮುನಿಆಂಜಿನಪ್ಪ ಹೇಳಿದರು.
ನಗರದ ತಾಲ್ಲೂಕು ಕಚೇರಿ ಮುಂದೆ ಪ್ರಜಾ ವಿಮೋಚನ ಚಳುವಳಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಶ್ರೀನಿವಾಸಪುರ ಘಟನೆಗೆ ಕಾರಣರಾದವರನ್ನು ಬಂಧಿಸುವ ಪ್ರಯತ್ನ ಮಾಡಿಲ್ಲ. ಗೃಹ ಸಚಿವರು ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಮೇಲೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ ಪುಂಡು ಹುಡಗರಿಗೆ ವಿದ್ಯಾರ್ಥಿನಿಯರ ಪೋಷಕರು ಬುದ್ದಿ ಮಾತು ಹೇಳಿದ್ದರು. ಈ ಕುರಿತು ಕೋಪಗೊಂಡ ಪುಂಡರು ಮತ್ತು ಅವರ ಬೆಂಬಲಿಗರು ಚಲಿಸುತ್ತಿದ್ದ ಬಸ್ಸನ್ನು ಅಡ್ಡಗಟ್ಟಿ ವಿದ್ಯಾರ್ಥಿಗಳನ್ನು ಕೆಳಗಿಳಿಸಿ ಹಲ್ಲೆ ಮಾಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಮೇಲೆ ದೌರ್ಜನ್ಯ ನಡೆಸಿದ್ದು ನಾಗರೀಕರಾದ ನಾವು ತಲೆ ತಗ್ಗಿಸಬೇಕಾದ ವಿಚಾರವಾಗಿದೆ.ಮೈಸೂರಿನಲ್ಲಿ ಇತ್ತೀಚಿಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರದಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟ ಗೃಹ ಸಚಿವರು ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದರು. ಆದರೆ ರಾಜ್ಯದ ಇತರೆ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತ್ರ ಯಾವುದೇ ರೀತಿಯ ಹೇಳಿಕೆಯು ಇಲ್ಲದೇ ಇರುವುದು ಗೃಹ ಸಚಿವರ ತಾರತಮ್ಯ ನೀತಿಯಾಗಿದೆ ಎಂದರು.
ಪಿವಿಸಿ ಜಿಲ್ಲಾಧ್ಯಕ್ಷ ಗೂಳ್ಯ ಹನುಮಣ್ಣ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವಾಗಿದೆ.ಶ್ರೀನಿವಾಸಪುರದ ಘಟನೆಗೆ ಈ ಕೂಡಲೇ ಪೊಲೀಸರು ಆರೋಪಿಗಳನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಬೇಕು ಮತ್ತು ಬಾದಿತರ ಮೇಲೆ ಹಾಕಿರುವ ಎಫ್‌ಐಆರ್ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಿವಿಸಿ ನಗರ ಜಿಲ್ಲಾ ಅಧ್ಯಕ್ಷ ಅಯೂಬ್‌ಖಾನ್,ಕಾರ್ಯದರ್ಶಿ ಚನ್ನಮರಿಯಪ್ಪ,ತಾಲ್ಲೂಕು ಅಧ್ಯಕ್ಷ ತಳಗವಾರಪುನೀತ್,ಉಪಾಧ್ಯಕ್ಷ ರಾಜಶೇಖರ್, ಕಾರ್ಮಿಕ ಘಟಕದ ಅಧ್ಯಕ್ಷ ಅಶೋಕ್,ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಮುನಿಲಕ್ಷ್ಮಮ್ಮ,ಕಾರ್ತಿಕ್, ಅಖೀಲ್‌ಅಹಮದ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..