ಚಿಕ್ಕಬಳ್ಳಾಪುರ: ನಮ್ಮ ದೇಶಕ್ಕೆ ಸುಲಭವಾಗಿ ಆಂಗ್ಲರಿಂದ ಸ್ವಾತಂತ್ರ್ಯ ಸಿಕ್ಕಿಲ್ಲ, ಹಲವು ಹೋರಾಟಗಳ ಹಾಗೂ ಮಹಾನ್ ಸ್ವಾಂತತ್ರ್ಯ ಹೋರಾಟಗಾರರ ಅವಿರತ ಶ್ರಮ ಮತ್ತು ತ್ಯಾಗ ಬಲಿದಾನಗಳ ಫಲವಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅಭಿಪ್ರಾಯ ಪಟ್ಟರು.
ಅವರು ಶುಕ್ರವಾರ ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿ.ಆರ್.ಪಿ.ಎಫ್) ಜೆ. ಸಿ ಬೆಟಾಲಿಯನ್ ಯೋಧರ ಸೈಕಲ್ ರ‍್ಯಾ ಲಿಗೆ ಚಾಲನೆ ನೀಡಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು 2022 ವರ್ಷಕ್ಕೆ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಭಾಗವಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯು (ಸಿ.ಆರ್.ಪಿ.ಎಫ್) ಕನ್ಯಾಕುಮಾರಿಯಿಂದ ನವದೆಹಲಿಯ ರಾಜ್ ಘಾಟ್ ವರೆಗೂ ಸೈಕಲ್ ರ‍್ಯಾಲಿಯನ್ನು ಕಳೆದ ಆಗಸ್ಟ್ 22 ರಿಂದ ಅಕ್ಟೋಬರ್ 02ರ ವರೆಗೆ ಹಮ್ಮಿಕೊಂಡಿದೆ.
ಈ ಸೈಕಲ್ ರ‍್ಯಾಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮೂಲಕ ಸಾಗುವುದು ನಮ್ಮ ಅದೃಷ್ಟ ಇಂತಹ ಭಾಗ್ಯ ಕೆಲವೇ ಜಿಲ್ಲೆಗಳಿಗೆ ಸಿಗಲಿದೆ. ಆದ್ದರಿಂದ ಈ ರ‍್ಯಾಲಿಗೆ ಚಾಲನೆ ನೀಡುವ ಕಾರ್ಯಕ್ಕೆ ನಮ್ಮ ಜಿಲ್ಲೆಗೂ ಅವಕಾಶ ಸಿಕ್ಕಿರುವುದು ನಮಗೆಲ್ಲ ಸಂತಸ ತಂದಿದೆ. ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಮೂಡಿದ್ದು ಯುವಕರಲ್ಲಿ ಸ್ಪೂರ್ತಿತುಂಬಿದೆ, ಎಲ್ಲರಲ್ಲೂ ದೇಶ ಭಕ್ತಿ ಇಮ್ಮಡಿಗೊಂಡಿದೆ ಈ ಮೂಲಕ ಸ್ವಾಂತತ್ರ್ಯ ಐತಿಹಾಸಿಕ ಮಹತ್ವವನ್ನು ನಮಗೆಲ್ಲರಿಗೂ ತಿಳಿಸಿಕೊಟ್ಟಿದೆ ಎಂದು ರ‍್ಯಾಲಿ ಬಗ್ಗೆ ಮೆಚ್ಚುಗೆ ವೆಕ್ತಪಡಿಸಿದರು.
ಯೋಧರ ದೇಶ ಕಾಯುವ ಸೇವೆಯು ಉಳಿದ ಎಲ್ಲಾ ಸೇವೆಗಳಿಗಿಂತ ಶ್ರೇಷ್ಠವಾದದ್ದು, ಇಂತಹ ಯೋಧರೊಂದಿಗೆ ಆಜಾದ್ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಹೆಮ್ಮೆಯ ವಿಚಾರ.20 ಜನರ ಈ ಪಡೆ ಪ್ರತಿ ದಿನ 80 ರಿಂದ 90 ಕಿ.ಮೀ ಸಾಗಲಿದೆ. ತಮಿಳುನಾಡು, ಕೇರಳ, ಕರ್ನಾಟಕ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳ ಮುಖಾಂತರ ಸು.2500 ಕಿ.ಮೀ ಸಾಗಿ ಅಕ್ಟೋಬರ್ 02ರ ಮಹಾತ್ಮ ಗಾಂಧೀಜಿ ಜಯಂತಿಯಂದು ನವದೆಹಲಿಯ ರಾಜ್ ಘಾಟ್ ನ್ನು ತಲುಪಲಿದೆ. ಈ ಪಡೆಗೆ ಶುಭವಾಗಲಿ, ಯಶಸ್ವಿಯಾಗಿ ಗುರಿ ತಲುಪಿ ದೇಶದೆಲ್ಲೆಡೆ ಹಬ್ಬದ ವಾತಾವರಣವನ್ನು ಮೂಡಿಸಿ ದೇಶ ಭಕ್ತಿಯನ್ನ ಮೊಳಗಿಸಲಿ ಎಂದರು.
ಇದಲ್ಲದೇ ಜಿಲ್ಲೆಯಲ್ಲಿ ಅಮೃತ್ ಮಹತ್ಸೋವ ಕಾರ್ಯಕ್ರಮದ ನಿಮಿತ್ತ ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಆಯೋಜಿಸಲಾಗಿದೆ. ದೇಶ ಭಕ್ತಿ ಸಾರುವ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ. ಕಳೆದ ಮಾರ್ಚ್ 12 ರಂದು ವಿಧುರಾಶ್ವತ್ಥದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮವನ್ನು ಅಂದಿನ ಮಾನ್ಯ ರಾಜ್ಯಪಾಲರು ಮತ್ತು ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿರುವುದನ್ನು ಮೆಲುಕು ಹಾಕಿ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಆರ್.ಪಿ.ಎಫ್ ನ ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಕುಮಾರ್ ರವರು ಮಾತನಾಡಿ, ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನಮ್ಮ ಪಡೆಯ ಸೈಕಲ್ ರ‍್ಯಾಲಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅಭೂತ ಪೂರ್ವ ಸ್ವಾಗತ ನೀಡಿ ಒಂದು ದಿನ ಇಲ್ಲಿ ತಂಗಲು ಸಕಲ ವ್ಯವಸ್ಥೆ ಕಲ್ಪಿಸಿ ಸತ್ಕರಿಸಿದ್ದಕ್ಕೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಕ್ಕೆ ಧನ್ಯವಾದಗಳನ್ನು ತಿಳಿಸಿದರು.
ಈ ವೇಳೆ ಸಂಪನ್ಮೂಲ ವ್ಯಕ್ತಿಯಾಗಿ ಡಾ|| ಚಿನ್ನಕೈವಾರಮಯ್ಯ ಅವರು ಮಾತನಾಡಿ, ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಸಿ.ಆರ್.ಪಿ.ಎಫ್ ಪಡೆಯ ಒಂದು ತಂಡ ಕನ್ಯಾಕುಮಾರಿಯಿಂದ ನವದೆಹಲಿಯ ರಾಜ್ ಘಾಟ್ ವರೆಗೆ, ಮತ್ತೋಂದು ತಂಡ ಕಾಶ್ಮೀರದಿಂದ ರಾಜ್ ಘಾಟ್ ವರೆಗೆ, ಇನ್ನೋಂದು ತಂಡ ಗುಜರಾತ್ ನಿಂದ ರಾಜ್ ಘಾಟ್ ವರೆಗೆ ಮತ್ತು ಅಸ್ಸಾಂ ನಿಂದ ರಾಜ್ ಘಾಟ್ ವರೆಗೆ ಮತ್ತೋಂದು ತಂಡ ಸೈಕಲ್ ರ‍್ಯಾಲಿಯನ್ನು ನಡೆಸಿ ಅ. 2ರಂದು ರಾಜ್ ಘಾಟ್ ತಲುಪಲಿದೆ. ಹೀಗೆ 4 ದಿಕ್ಕುಗಳಿಂದ 4 ತಂಡಗಳು ಸೈಕಲ್ ರ‍್ಯಾಲಿ ಮೂಲಕ ದೇಶದ ಉದ್ದಗಲಕ್ಕೂ ಸಂಚರಿಸಿ ಸ್ವಾತಂತ್ರ್ಯ ಸಂಗ್ರಾಮದ ಮಹತ್ವವನ್ನು ಸಾರಲಿವೆ ಎಂದು ತಿಳಿಸಿ ಸ್ವಾತಂತ್ರ್ಯಗಳಿಸಿದ ಹಿನ್ನೆಲೆಯ ಇತಿಹಾಸದ ವಿವಿಧ ಘಟನೆಗಳ ಬಗ್ಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಸಿ.ಆರ್.ಪಿ.ಎಫ್ ನ ಅಸಿಸ್ಟೆಂಟ್ ಕಮ್ಯಾಂಡೆಂಟ್ ಕಾರ್ತಿಕ್, ವಿನಾಯಕ, ಸಮನ್ವಯ ಅಧಿಕಾರಿ ತ್ರೀಲೋಚನಾ ಪ್ರಸಾದ್, ಉಪ ಪೊಲೀಸ್ ವರಿಷ್ಠಾಧಿಕಾರಿ ವಾಸುದೇವ್, ತಹಸೀಲ್ದಾರ್ ದಿವಾಕರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಸ್ವಾಮಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.
ಸೈಕಲ್ ರ‍್ಯಾಲಿಯ ಚಾಲನೆಗೂ ಮುನ್ನ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಭರತ ನಾಟ್ಯ, ದೇಶ ಭಕ್ತಿ ಗೀತೆ ಗಾಯನ, ಜಾನಪದ ನೃತ್ಯಗಳು ಯೋಧರ ಹಾಗೂ ನೆರೆದಿದ್ದವರ ಗಮನ ಸೆಳೆದವು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..