ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಿನ್ನೆ ನಡೆದ ಲಸಿಕಾ ಉತ್ಸವ ಯಶಸ್ವಿಯಾಗಿದ್ದು, ಒಂದೇ ದಿನದಲ್ಲಿ ಅರ್ಧ ಲಕ್ಷ ಜನರು ಲಸಿಕೆ ಪಡೆದಿರುವುದು ಜಿಲ್ಲೆಯ ಜನರ ಸ್ಪಂದಿಸುವ ಸಕಾರಾತ್ಮಕ ಗುಣಕ್ಕೆ ಸಾಕ್ಷಿ. ಇನ್ನು ಒಂದು ವಾರದೊಳಗಾಗಿ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಎಲ್ಲಾ 18 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಡೋಸ್ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಆರ್.ಲತಾ ಅವರು ತಿಳಿಸಿದ್ದಾರೆ.
ಅವರು ಗುರುವಾರ ಕೋವಿಡ್ ಲಸಿಕಾಕರಣದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡುತ್ತಾ, ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 1 ರಂದು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ ಒಟ್ಟು 225 ಕೇಂದ್ರಗಳಲ್ಲಿ ಲಸಿಕಾ ಉತ್ಸವವನ್ನು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಹಮ್ಮಿಕೊಳ್ಳಲಾಗಿತ್ತು. ಈ ಉತ್ಸವದಲ್ಲಿ ಜಿಲ್ಲೆಯ ಜನರು ಅತ್ಯುತ್ಸಾಹಿಗಳಾಗಿ ಮತ್ತು ಸ್ವಯಂಪ್ರೇರಿತರಾಗಿ ಭಾಗವಹಿಸಿ ಲಸಿಕಾ ಉತ್ಸವವನ್ನು ಯಶಸ್ವಿಗೊಳಿಸುವ ಮೂಲಕ ಜಿಲ್ಲೆಯ ಜನರು ಹೆಚ್ಚು ಸ್ಪಂದನಾಶೀಲರು ಎಂಬುದನ್ನು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ.
ನಿನ್ನೆ ನಡೆದ ಲಸಿಕಾ ಉತ್ಸವದಲ್ಲಿ 50 ಸಾವಿರ ಡೋಸ್ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಆದರೆ, ಆ ಗುರಿಯನ್ನೂ ಮೀರಿ 50,748 ಜನರಿಗೆ ಲಸಿಕೆ ಹಾಕುವ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಡೋಸ್ ಲಸಿಕೆ ನೀಡಿ, ಆ ಮುಖಾಂತರ ಜಿಲ್ಲೆಯು ತನ್ನ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ದಾಖಲೆಗೆ ನಾಂದಿ ಹಾಡಿದೆ. ಸೆ.1 ರ ಬುಧವಾರದಂದು ನಡೆದ ಲಸಿಕಾ ಉತ್ಸವದಲ್ಲಿ ನೀಡಿದ 50,748 ಜನರ ಪೈಕಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 10,005, ಚಿಂತಾಮಣಿ ತಾಲ್ಲೂಕಿನಲ್ಲಿ 12,606, ಬಾಗೇಪಲ್ಲಿ ತಾಲ್ಲೂಕಿನಲ್ಲಿ 5,680, ಗೌರಿಬಿದನೂರು ತಾಲ್ಲೂಕಿನಲ್ಲಿ 10,768, ಗುಡಿಬಂಡೆ ತಾಲ್ಲೂಕಿನಲ್ಲಿ 2,293 ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ 9,396 ಜನರಿಗೆ ಕೋವಿಡ್ ಲಸಿಕೆಯನ್ನು ಒಂದೇ ದಿನ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿದಿನ 50 ಸಾವಿರ ಲಸಿಕೆಯನ್ನು ಹಾಕುವ ಗುರಿಯನ್ನು ಜಿಲ್ಲಾಡಳಿತ ಹೊಂದಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೆಲವೇ ದಿನಗಳಲ್ಲಿ ಲಸಿಕೆ ಹಾಕುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ.
ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಒಟ್ಟು 9,63,038 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಈ ಪೈಕಿ 6,36,212 ಜನರು ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದರೆ, 2,24,336 ಜನರು ಎರಡನೇ ಡೋಸ್ ಲಸಿಕೆಯನ್ನೂ ಈ ವರೆಗೆ ಪಡೆದಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 8,60,548 ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ನಿಗದಿತ (9,63,038) ಗುರಿಯಲ್ಲಿ ಶೇ.66 ರಷ್ಟು ಜನರು ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ.
ಕೋವಿಡ್‌ನ ಮೊದಲ ಡೋಸ್ ಲಸಿಕೆಯನ್ನು ಪಡೆದು ಎರಡನೇ ಡೋಸ್ ಲಸಿಕೆ ಪಡೆಯಲು ಅರ್ಹರಿದ್ದವರ ಪೈಕಿ ಶೇ.76 ರಷ್ಟು ಜನರಿಗೆ ಎರಡನೇ ಡೋಸ್ ಲಸಿಕೆಯನ್ನೂ ಹಾಕಲಾಗಿದೆ. ಲಸಿಕಾ ಉತ್ಸವದಲ್ಲಿ ಹಗಲಿರುಳು ಶ್ರಮಿಸಿ ದಾಖಲೆಯ ಗುರಿ ಸಾಧನೆಗೆ ಕಾರಣರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಇತರ ಸಮನ್ವಯ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ. ವಿಶೇಷವಾಗಿ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು ಹಾಗೂ ದಾದಿಯರ ಲಸಿಕಾಕರಣದ ನಿರಂತರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದಲ್ಲದೇ ಎಲ್ಲಾ ತಹಸೀಲ್ದಾರ್‌ಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಯಪಡೆಗಳ ಅಧಿಕಾರಿಗಳು, ಪಿ. ಡಿ. ಓ ಗಳು ಮತ್ತು ಸಿಬ್ಬಂದಿ, ಎಲ್ಲಾ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು/ಸಿಬ್ಬಂದಿ ಮತ್ತಿತರ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರೋಪಾದಿಯಲ್ಲಿ ಸಮನ್ವಯತೆಯೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದೇ ಲಸಿಕಾಕರಣದ ವೇಗಕ್ಕೆ ಕಾರಣವಾಗಿದ್ದು, ಈ ಕಾರ್ಯವನ್ನು ಹೀಗೆಯೇ ಮುಂದುವರೆಸಿಕೊಂಡು ಹೋಗುವ ಮೂಲಕ ಪ್ರತಿದಿನ 50 ಸಾವಿರ ಡೋಸ್ ಲಸಿಕೆಯನ್ನು ನೀಡಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಒಂದು ವಾರದೊಳಗಾಗಿ ಮೊದಲನೇ ಡೋಸ್ ಲಸಿಕೆ ಹಾಕಬೇಕೆಂದು ತಿಳಿಸಿದರು.
ಕೋವಿಡ್ ಸೋಂಕು ನಿಯಂತ್ರಣ ಮತ್ತು ಮೂರನೇ ಅಲೆ ಬಾರದಂತೆ ತಡೆಯುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರು ಕಡ್ಡಾಯವಾಗಿ ಪಡೆದು ಸುರಕ್ಷಿತ ವಲಯದಲ್ಲಿರಬೇಕಾಗಿರುತ್ತದೆ. ಜಿಲ್ಲೆಯಾದ್ಯಂತ ಲಸಿಕಾಕರಣ ಪ್ರಕ್ರಿಯೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕೋವಿಡ್-19ರ ಮಹಾಮಾರಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಲಸಿಕಾಕರಣ ಒಂದೇ ಶಾಶ್ವತ ಪರಿಹಾರವಾಗಿದೆ ಎಂದು ಇದೇ ವೇಳೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..