ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ನಗರೋತ್ಥಾನ ಅನುದಾನಕ್ಕೆ ತಡೆ ಹಿಡಿಯುವುದು ಸೇರಿದಂತೆ ನಗರದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳಾಗಿಲ್ಲ. ಅಭಿವೃದ್ಧಿಗೆ ಯಾವುದೇ ಅಡ್ಡಗಾಲಾಕುತ್ತಿಲ್ಲ ಎನ್ನುವ ಬಿಜೆಪಿ ಮುಖಂಡರು ಅನುದಾನಗಳನ್ನು ನೀಡಿರುವ ಬಗ್ಗೆ ಸಾಬೀತು ಪಡಿಸಲಿ ಎಂದು ಶಾಸಕ ಟಿ.ವೆಂಕಟರಮಣಯ್ಯ ಸವಾಲು ಹಾಕಿದ್ದಾರೆ.
ನಗರಸಭೆ ಚುನಾವಣೆ, ಮಂಗಳವಾರ ನಡೆದ ಸಚಿವ ಎಂಟಿಬಿ ನಾಗರಾಜ್ ಪತ್ರಿಕಾಗೋಷ್ಠಿ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ನಗರೋತ್ಥಾನ ಯೋಜನೆಯ 8 ಕೋಟಿ ಅನುದಾನ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾದರೆ ಶಾಸಕರಿಗೆ ಹೆಸರು ಬರುತ್ತದೆ ಎಂದು ಮೂಗರ್ಜಿ ಮೂಲಕ ತಡೆಯೊಡ್ಡಿದ್ದಾರೆ. ಈ ಕುರಿತು ಸಚಿವರಾದ ಅಶೋಕ್,ಈಗಿನ ಉಸ್ತುವಾರಿ ಸಚಿವರಾದ ಎಂ.ಟಿ.ಬಿ ನಾಗರಾಜ್ ಅವರಿಗೆ ಮನವಿ ಮಾಡಲಾಗಿದೆ ಆದರೂ ಮಾಹಿತಿ ಇಲ್ಲವೆಂದು ಅವರು ಹೇಳಿರುವುದು ರಾಜಕೀಯ ಪ್ರೇರಿತವಾಗಿದೆ.
ನಗರೋತ್ಥಾನ ಅನುದಾನದ 8 ಕೋಟಿ ರೂ ಬಿಡುಗಡೆ ಮಾಡುವಂತೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿತ್ತು. ಈ ಬಗ್ಗೆ ಗಮನಿಸುವುದಾಗಿ ಉಸ್ತುವಾರಿ ಸಚಿವರು ಈಗ ಉತ್ತರ ನೀಡಿದ್ದಾರೆ ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ನಗರದಲ್ಲಿ 60 ಕೋಟಿ ರೂ ಕಾಮಗಾರಿಗಳು ನಡೆದಿವೆ. ಸಿದ್ದೇನಾಯಕನಹಳ್ಳಿ ಬಳಿ 90 ಕೋಟಿ ರೂ ವೆಚ್ಚದಲ್ಲಿ 250 ಹಾಸಿಗೆಗಳ ಜಿಲ್ಲಾಸ್ಪತ್ರೆ ನಿರ್ಮಾಣಕ್ಕಾಗಿ 7 ಎಕರೆ ಜಮೀನು ಮಂಜೂರಾಗಿ 10 ಕೋಟಿ ರೂ ಅನುದಾನ ಬಿಡುಗಡೆ ಆಗಿದೆ. ಆದರೆ ಜಿಲ್ಲಾ ಕೇಂದ್ರದ ನೆಪವೊಡ್ಡಿ ತಾಲೂಕಿಗೆ ಜಿಲ್ಲಾ ಆಸ್ಪತ್ರೆ ತಪ್ಪಿಸಲು ಶಡ್ಯಂತ್ರ ನಡೆಸಲಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಲಾದ, ಸಮ್ಮಿಶ್ರ ಸರ್ಕಾರದಲ್ಲಿ ಅನುದಾನ ಬಿಡುಗಡೆ ಮಾಡಲಾದ ಆಸ್ಪತ್ರೆಯನ್ನು ಕೈತಪ್ಪಿಸಿದರೆ ತಾಲೂಕಿನ ಎಲ್ಲಾ ಸಂಘಟನೆಗಳ ಸಹಕಾರದೊಂದಿಗೆ ಹೋರಾಟ ನಡೆಸಲಾಗುವುದೆಂದರು.
ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವ ರಸ್ತೆಗಳ ಅಗಲೀಕರಣಕ್ಕೆ ಈ ಸರ್ಕಾರದಲ್ಲಿ ಅನುದಾನ ಬಿಡುಗಡೆಯಾಗುವುದು ಅನುಮಾನವಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ವಹಿಸಲಾಗುವುದು. ಸಂಚಾರಿ ಪೊಲೀಸ್ ಠಾಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೇಕಾರರಿಗೆ 250 ಮನೆಗಳನ್ನು ನಿರ್ಮಿಸಲಾಗಿದೆ ಎಂದು ಶಾಸಕರು ರಸ್ತೆಗಳ ಅಗಲೀಕರಣ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಪ್ರಣಾಳಿಕೆ: ನಗರಸಭೆ ವ್ಯಾಪ್ತಿಯ ನಾಗರಕೆರೆ ಸಮಗ್ರ ಅಭಿವೃದ್ಧಿ ಮತ್ತು ಹೊರವರ್ತುಲದಲ್ಲಿ ಸುತ್ತಲು ಟ್ರಾಕಿಂಗ್ ರಸ್ತೆ ಅಭಿವೃದ್ಧಿ. ಎತ್ತಿನಹೊಳೆ ಯೋಜನೆಯಲ್ಲಿ ಅರಳುಮಲ್ಲಿಗೆ ಕೆರೆಗೆ ನೀರು ಹರಿಸಿ, ದೊಡ್ಡಬಳ್ಳಾಪುರ ನಗರಸಭೆ 31 ವಾರ್ಡ್ ಗಳಿಗೆ ಕುಡಿಯುವ ನೀರಿನ ಯೋಜನೆಗೆ ಒತ್ತು.ನಗರಸಭೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುವುದು. ಯಲಹಂಕದಿಂದ – ದೊಡ್ಡಬಳ್ಳಾಪುರಕ್ಕೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲು ಒತ್ತು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯಲ್ಲಿ 1.00 ಎಕರೆ ಜಮೀನು ಮಂಜೂರು ಮಾಡುವುದು, ನಿವೇಶನ ಹಾಗೂ ವಸತಿ ರಹಿತರಿಗೆ ಎ+2 ವಸತಿ ನಿರ್ಮಾಣ ಮಾಡಲು ಒತ್ತು ನೀಡುವುದು ನಗರಸಭೆ ಚುನಾವಣೆ ಪ್ರಣಾಳಿಕೆಯಲ್ಲಿದೆ ಎಂದು ತಿಳಿಸಿದರು.
ಗೆಲ್ಲುವ ವಿಶ್ವಾಸ: 10ರಿಂದ 12 ಮಂದಿ ಉನ್ನತ ವ್ಯಾಸಂಗ ಮಾಡಿರುವ ವಿದ್ಯಾವಂತರು ಹಾಗೂ ನಗರಸಭೆ ಆಡಳಿತ ಅನುಭವ ಇರುವ ನಾಲ್ಕೈದು ಮಂದಿ ಚುನಾವಣೆಗೆ ಸ್ಪರ್ಧಿಸಿದ್ದು ಉತ್ತಮ ಆಡಳಿತ ನಡೆಸಲು ಮತದಾರರು 31 ವಾರ್ಡ್‍ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಜಗನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ನಾರಾಯಣ ಗೌಡ ಮುಖಂಡರಾದ ಜವಾಜಿ ಸೀತಾರಾಮ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..