ಚಿಕ್ಕಬಳ್ಳಾಪುರ: ಹೊರ ರಾಜ್ಯಗಳಿಂದ ರಾಜ್ಯಕ್ಕೆ ಅದರಲ್ಲೂ ವಿಶೇಷವಾಗಿ ಕೇರಳದಿಂದ ರಾಜ್ಯಕ್ಕೆ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್‌ಗಾಗಿ ಮಾರ್ಗಸೂಚಿಗಳನ್ನು ಶೀಘ್ರದಲ್ಲೆ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಕುಪ್ಪಳ್ಳಿ ಗ್ರಾಮಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಕರೊನಾ ನೆರೆರಾಜ್ಯಗಳಲ್ಲಿ ಹೆಚ್ಚಾಗುತ್ತಿದ್ದು ರಾಜ್ಯದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮಂಗಳೂರು ಸೇರಿದಂತೆ ರಾಜ್ಯದ ಗಡಿಜಿಲ್ಲೆಗಳಿಗೆ ಕೇರಳದಿಂದ ಪ್ರತಿನಿತ್ಯ ಶಿಕ್ಷಣ , ಆರೋಗ್ಯ, ಮತ್ತು ದೈನಂದಿನ ವಹಿವಾಟುಗಳಿಗೆ ಜನರು ಬರುತ್ತಿದ್ದಾರೆ.ಅಂತಹವರಿಗೆ ರಾಜ್ಯಕ್ಕೆ ಸಂಬಂಧಿಸಿದಂತೆ ಹೇಗಿರಬೇಕೆಂಬ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ವಿಮಾನನಿಲ್ದಾಣ, ರೈಲುಗಳಲ್ಲಿ ಬರುವ ಪ್ರವಾಸಿಗರಿಗೆ ಸಾಂಸ್ಥಿಕ ಕ್ವಾರಂಟೈನ್ ಗೆ ಕಡ್ಡಾಯವಾಗಿ ಒಳಪಡಿಸಲಾಗುವುದು.
ಕೆಜಿಎಫ್‌ನಲ್ಲಿ ಒಂದೇ ನರ್ಸಿಂಗ್ ಸ್ಕೂಲ್ನಲ್ಲಿ 32 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ. ಬುಧವಾರ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು ಶಿಕ್ಷಣ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ನರ್ಸಿಂಗ್ ಸ್ಕೂಲ್‌ಗೆ ಬಂದ ವೇಳೆ ಆರ್ ಟಿ ಪಿಸಿಆರ್ ನೆಗೆಟಿವ್ ವರದಿಯನ್ನು ನೋಡಿ ಪ್ರವೇಶ ನೀಡಬೇಕಿತ್ತು, ಇದು ಶಿಕ್ಷಣ ಸಂಸ್ಥೆಯ ಹೊಣೆಗಾರಿಕೆ ಕೂಡ ಆಗಿದೆ.
ಕೇರಳದಲ್ಲಿ ಪ್ರತಿನಿತ್ಯ 30,000 ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಕರ್ನಾಟಕ ರಾಜ್ಯದಲ್ಲಿ ಪ್ರತಿನಿತ್ಯ 50,000 ಇದ್ದ ಪ್ರಕರಣಗಳನ್ನ700-800ಕ್ಕೆ ಇಳಿಸಲು ಸರ್ಕಾರ ಸಾಕಷ್ಟು ಶ್ರಮ ವಹಿಸಿದೆ. ಸರ್ಕಾರದ ನಿಯಂತ್ರಣ ಕ್ರಮಗಳ ಜೊತೆಗೆ ಎಲ್ಲ ಕಡೆಯಿಂದಲೂ ಸಹಕಾರ ಬೇಕಿದೆ. ಹಬ್ಬ ಹರಿದಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮುನ್ನ ಎಚ್ಚರ ವಹಿಸಬೇಕಿದೆ, ಕೋವಿಡ್ ನ ಎರಡೂ ಲಸಿಕೆಗಳನ್ನು ಪಡೆಯುವವರೆಗೆ ಕೆಲವು ತಿಂಗಳು ಕಾಲ ಮುನ್ನೆಚ್ಚರಿಕೆ ಕೈಗೊಳ್ಳ್ಳಬೇಕಾದ ಅನಿವಾರ್ಯತೆ ಇದೆ.
ಸಾರ್ವಜನಿಕ ಗಣೇಶೋತ್ಸವ ಕುರಿತಂತೆ ಇಲಾಖೆಯಿಂದ ನೀಡಬೇಕಾದ ಸಲಹೆ, ತಾಂತ್ರಿಕ ಸಲಹಾಸಮಿತಿಯ ಅಭಿಪ್ರಾಯವನ್ನು ಮುಖ್ಯಮಂತ್ರಿಯವರಿಗೆ ತಿಳಿಸಲಾಗಿದೆ.
ಕರೊನಾವನ್ನು ನಿಯಂತ್ರಿಸುವ ಒಂದೇ ದೃಷ್ಟೀಕೋನದಿಂದ ನಾವು ಸಲಹೆ ನೀಡಿದ್ದೇವೆ. ಮುಖ್ಯಮಂತ್ರಿಯವರು ಎಲ್ಲ ದೃಷ್ಟೀಕೋನಗಳಿಂದ ಪರಿಶೀಲಿಸಿ ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟವನ್ನು ಕೋಚಿಮುಲ್‌ನಿಂದ ಪ್ರತ್ಯೇಕಗೊಳಿಸುವ ವಿಚಾರವು ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು ಮುಖ್ಯ ಮಂತ್ರಿಯವರು ಈಗ ಜಿಲ್ಲೆಯ ಜನರ ಬೇಡಿಕೆ ಈಡೇರಿಸಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಗ ಪ್ರತ್ಯೇಕ ಹಾಲು ಒಕ್ಕೂಟ ಬೇಕು ಎಂಬುದು ಜಿಲ್ಲೆಯ ನ್ಯಾಯಯುತವಾದ ಬೇಡಿಕೆಯಾಗಿದೆ ಎಂದು ಹೇಳಿದರು.
ಮದ್ಯಪಾನಕ್ಕೂ ಲಸಿಕೆಗೂ ಸಂಬಂಧವಿಲ್ಲ: ಮದ್ಯಪಾನ ಮಾಡುವವರಿಗೆ ಕೊವಿಡ್ ಲಸಿಕೆ ಪಡೆಯುವುದರಿಂದ ಅಡ್ಡ ಪರಿಣಾಮ ಆಗುತ್ತದೆ ಎಂಬುದು ತಪ್ಪು ಕಲ್ಪನೆ. ಮದ್ಯಪಾನ ತ್ಯಜಿಸಿದರೆ ಅರೊಗ್ಯ ದೃಷ್ಠಿಯಿಂದ ಒಳಿತು. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಲಸಿಕೆ ಪಡೆದರೆ ಸಾವು, ಸಂತಾನ ಸಮಸ್ಯೆ ಎಂಬುದೆಲ್ಲ ಸುಳ್ಳು. ಈ ವದಂತಿಗಳಿಗೆ ಕಿವಿಗೊಡಬಾರದು. ಲಸಿಕೆ ತೆಗೆದುಕೊಂಡರೆ ಯಾವುದೇ ಪ್ರತಿಕೂಲ ಪರಿಣಾಮ ಆಗುವುದಿಲ್ಲ ಎಂದವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಅಧ್ಯಕ್ಷರಾದ ಕೆ.ವಿ.ನಾಗರಾಜು, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ನಗರಸಭಾ ಅಧ್ಯಕ್ಷರಾದ ಆನಂದರೆಡ್ಡಿ ಬಾಬು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್, ತಹಸಿಲ್ದಾರ್ ಗಣಪತಿಶಾಸ್ತ್ರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್, ವಿವಿಧ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..