![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ಕಲಬುರಗಿ: ಭ್ರಷ್ಟಾಚಾರದಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಲೋಕಾಯುಕ್ತ ಸಂಸ್ಥೆಯ ಅಗತ್ಯತೆ ಹಾಗೂ ಕಾಯ್ದೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಕೇಸುಗಳಲ್ಲಿ ದೂರು ಮತ್ತು ಆಪಾದನೆ ಎಂಬ ಎರಡು ವಿಧ ಇವೆ. ತನ್ನ ಸಮಸ್ಯೆ ಅಥವಾ ತನಗೆ ಅನ್ಯಾಯವಾದಲ್ಲಿ ಅಂತಹ ವ್ಯಕ್ತಿ ದೂರು ನೀಡಬಹುದು, ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ, ಲೋಪ ಮುಂತಾದವುಗಳ ವಿರುದ್ಧ ಆಪಾದನೆಯ ಕೇಸು ಹಾಕಬಹುದಾಗಿದೆ ಎಂದು ಅವರು ಹೇಳಿದರು.
ಬಹುತೇಕ ಹಳ್ಳಿಗಳಲ್ಲಿ ಇನ್ನೂ ಶೌಚಾಲಯಗಳನ್ನು ಬಳಸದೆ, ಬಯಲು ಬಹಿರ್ದೆಸೆಗೆ ಹೋಗುತ್ತಾರೆ ಎಂದು ಕೆಂಡಕಾರಿದ ಉಪಲೋಕಾಯುಕ್ತರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ತಾಲ್ಲೂಕಿನ 10 ಗ್ರಾಮ ಪಂಚಾಯ್ತಿಗಳನ್ನು ಅಯ್ಕೆ ಮಾಡಿಕೊಂಡು ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ಮಾಡಬೇಕು ಎಂದು ಕರೆ ನೀಡಿದ ಅವರು, ಬಯಲು ಬಹಿರ್ದೆಸೆ ಹೋಗುವುದನ್ನು ತಡೆಯದಿದ್ದರೆ ಇಓಗಳ ವಿರುದ್ಧ ಕೇಸ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
10 ಗ್ರಾಮ ಪಂಚಾಯ್ತಿಗಳ ಪ್ರತಿಯೊಂದು ಹಳ್ಳಿಗಳಲ್ಲಿ ಎಷ್ಟು ಜನ ಫಲಾನುಭವಿಗಳಿದ್ದಾರೆ. ಎಷ್ಟು ಜನ ಶೌಚಾಲಯ ಕಟ್ಟಿಸಿಕೊಂಡಿದ್ದಾರೆ. ಎಷ್ಟು ಜನ ಕಟ್ಟಿಸಿಕೊಂಡಿಲ್ಲ. ಕಟ್ಟಿಸಿಕೊಂಡವರು ಎಷ್ಟು ಜನ ಬಳಕೆ ಮಾಡುತ್ತಾರೆ, ಎಷ್ಟು ಜನ ಬಳಕೆ ಮಾಡುತ್ತಿಲ್ಲ ಹಾಗೂ ಬಳಕೆ ಮಾಡದಂಥವರ ವಿರುದ್ಧ ಯಾವ ಕ್ರಮಕೈಗೊಂಡಿದ್ದೀರಾ ಎಂಬ ಬಗ್ಗೆ ಸಂಪೂರ್ಣ ವರದಿ ನೀಡಬೇಕು ಎಂದು ಅವರು ತಾಕೀತು ಮಾಡಿದರು.
ಈ ಸಂಬಂಧ ನಿರ್ಲಕ್ಷ್ಯ ತೋರುವ ತಾ. ಪಂ. ಇಓ ವಿರುದ್ಧ ಕರ್ತವ್ಯ ಲೋಪ ಮುಂತಾದ ಗಂಭೀರ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದರು.
ಈ ಕುರಿತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಹೊಣೆಗಾರರನ್ನಾಗಿಸಿದಲ್ಲಿ ಮಾತ್ರ ಯಶ ಸಾಧಿಸಲು ಸಾಧ್ಯ ಎಂದು ಕಿವಿ ಮಾತು ಹೇಳಿದ ಅವರು ಎಲ್ಲರೂ ಕೂಡಿ ಗ್ರಾಮಸ್ಥರಿಗೆ ಶೌಚಾಲಯ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ತಿದ್ದುಪಡಿ ತರಲಾಗಿದೆ. ಉಚ್ಚ ನ್ಯಾಯಾಲಯದ ಪೀಠ ಬಂತು ಹತ್ತಾರು ಯೋಜನೆಗಳು-ಅಭಿವೃದ್ಧಿ ಕಾಮಗಾರಿಗಳಾದರೂ ಇಲ್ಲಿನ ಜನರ ಜೀವನ ಮಟ್ಟ ಇನ್ನೂ ಸುಧಾರಿಸಲಿಲ್ಲವೇಕೆ ಎಂದು ಪ್ರಶ್ನಿಸಿದ ಅವರು 371ಜೆ ಮೀಸಲಾತಿ ಅಡಿ ಆಯ್ಕೆಯಾದ ಇಲ್ಲಿನ ಅಧಿಕಾರಿಗಳು ಪ್ರದೇಶದ ಅಭಿವೃದ್ಧಿಗೆ ಬದ್ಧವಾಗಿರಬೇಕಿದೆ. ಸ್ವ-ಹಿತಾಸಕ್ತಿ ಬದಿಗೊತ್ತಿ ಸಾರ್ವಜನಿಕೆ ಸೇವೆಗೆ ನಿಮ್ಮನು ನೀವು ಅರ್ಪಿಸಿಕೊಳ್ಳಿ ಎಂದರು.
ವಸತಿ ನಿಲಯ ಸ್ವಚ್ಛವಾಗಿರಲಿ: ವಸತಿ ನಿಲಯ ಸ್ವಚ್ಛವಾಗಿರಬೇಕು. ಅಲ್ಲಿ ಅಭ್ಯಾಸ ಮಾಡುವ ಮಕ್ಕಳು ಭಾವಿ ಪ್ರಜೆಗಳಾಗಿದ್ದು, ಅವರಲ್ಲಿ ಉತ್ತಮ ಶಿಸ್ತನ್ನು ತರಬೇಕು. ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ಕೊಡಿ. ಕೋವಿಡ್ ಕಾರಣ ಒಂದೂವರೆ ವರ್ಷದಿಂದ ಶಾಲೆ ತೆರೆದಿಲ್ಲ. ಈಗ ಸರ್ಕಾರ ಹಂತ-ಹಂತವಾಗಿ ತೆರೆಯುತ್ತಿದ್ದು, ಮಕ್ಕಳು ಬಹುತೇಕ ಪಠ್ಯಗಳನ್ನು ಮರೆತಿರುತ್ತಾರೆ. ಮಕ್ಕಳಲ್ಲಿ ಮತ್ತೇ ಓದುವ ಹಂಬಲ ಮೂಡಿಸುವುದರ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳಬೇಕಾದ ಕೆಲಸ ಶಿಕ್ಷಕರದ್ದಾಗಿದೆ ಎಂದರು.
ಟಾಸ್ಕ್ ಫೋರ್ಸ್ ಸಂವೇದನಾಶೀಲವಾಗಿರಲಿ: ಕೋವಿಡ್ ಮೊದಲನೇ ಮತ್ತು ಎರಡನೇ ಅಲೆ ಕಾರಣ ಬಹಳಷ್ಟು ಯುವಕರು ಮತ್ತು ಮೇಧಾವಿಗಳನ್ನು ಕಳೆದುಕೊಂಡಿವೆ. ತಜ್ಞರ ಪ್ರಕಾರ ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ರೋಗ ಹರಡದಂತೆ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸಬೇಕು. ಗ್ರಾಮೀಣ ಭಾಗದಲ್ಲಿರುವ ಪಿ.ಡಿ.ಓ. ಜನಪ್ರತಿನಿಧಿಗಳು ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಒಳಗೊಂಡ ಟಾಸ್ಕ್ ಫೋರ್ಸ್ ಕಮಿಟಿ ಹೆಚ್ಚು ಸಂವೇದನಾಶೀಲವಾಗಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಕಮಿಟಿ ಸದಸ್ಯರಿಗೆ ಆರೋಗ್ಯ ಇಲಾಖೆಯಿಂದ ಕಾರ್ಯಾಗಾರ ಆಯೋಜಿಸಿ ಎಂದು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅಭಿಪ್ರಾಯಪಟ್ಟರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..