ಬೆಂ.ಗ್ರಾ.ಜಿಲ್ಲೆ:
ಹೊಸಕೋಟೆ ತಾಲ್ಲೂಕಿನಲ್ಲಿ 13 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿದ್ದು, ಅದರೊಂದಿಗೆ ತಾಲ್ಲೂಕಿಗೆ ತಾಯಿ
ಮತ್ತು ಮಗುವಿನ ಆಸ್ಪತ್ರೆಯ ಅವಶ್ಯಕತೆಯಿದೆ ಎಂದು ಮನವಿ ಮಾಡಿರುವ ಹಿನ್ನೆಲೆ, ತಾಲ್ಲೂಕಿನಲ್ಲಿ ತಾಯಿ
ಮತ್ತು ಮಗುವಿನ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಕುರಬರಹಟ್ಟಿ
ಜನತಾ ಕಾಲೋನಿಯಲ್ಲಿರುವ ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಂದು ಭೇಟಿ ನೀಡಿ, “ಸಕ್ರಿಯ
ಕ್ಷಯರೋಗ ಪತ್ತೆ ಆಂದೋಲನ” ಪರಿವೀಕ್ಷಣೆ ನಡೆಸಿ, ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಕೋವಿಡ್ ನಿಯಂತ್ರಣದ ಸ್ಥಿತಿಗತಿಗಳ ಬಗ್ಗೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಸುದೀರ್ಘವಾದ ಸಮಾಲೋಚನಾ
ಸಭೆ ನಡೆಸುವ ಮೂಲಕ ಜಿಲ್ಲೆಯ ವಾಸ್ತವ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈಗಾಗಲೇ ರಾಜ್ಯದಲ್ಲಿ ಕೋವಿಡ್ ನಿಂದ ಗುಣಮುಖರಾಗಿರುವ
28 ಲಕ್ಷಕ್ಕೂ ಹೆಚ್ಚು ಜನರು ಪೈಕಿ, ನಾಲ್ಕೈದು ಜಿಲ್ಲೆಗಳಿಂದ ಒಟ್ಟು 23 ಜನರಿಗೆ ಕ್ಷಯ ರೋಗ ಪತ್ತೆಯಾಗಿದ್ದು,
ಜನರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿರುವ 28 ಲಕ್ಷ ಜನರಿಗೆ ಕ್ಷಯರೋಗದ
ತಪಾಸಣೆಯನ್ನು ಮಾಡುತ್ತಿದ್ದೇವೆ. ಎಂದರು.
ಎರಡು ವಾರಕ್ಕೂ ಹೆಚ್ಚು ಕೆಮ್ಮು ಅಥವಾ ರಾತ್ರಿ ಹೊತ್ತು
ಜ್ವರ ಬರುವ ಹಾಗಿದ್ದರೆ, ಯಾವುದೇ ಕಾರಣವಿಲ್ಲದೇ ತೂಕ ಕಡಿಮೆ ಆಗುವುದು, ಇಂತಹ ಲಕ್ಷಣಗಳು ಕಂಡು ಬಂದಲ್ಲಿ
ಹತ್ತಿರದ ಆಸ್ಪತ್ರೆಗೆ ಹೋಗಿ, ಪರೀಕ್ಷೆ ಮಾಡಿಸಿ ಎಂದು ತಿಳಿಸಿದರು.
ಎಲ್ಲರೂ ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಪರೀಕ್ಷೆಯನ್ನ
ಮಾಡಿಸಿಕೊಂಡು, ಸೋಂಕು ದೃಢ ಪಟ್ಟಲ್ಲಿ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದರಲ್ಲದೆ, ಈ
ಸಾಂಕ್ರಾಮಿಕ ಕ್ಷಯ ರೋಗವು ಬೇರೆಯವರಿಗೂ ಹರಡುವ ಸಾಧ್ಯತೆ ಇರುವುದರಿಂದ, ಇತರರಿಗೆ ತೊಂದರೆಯಾಗದಂತೆ
ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಕ್ಷಯ ರೋಗ ತಪಾಸಣೆಯನ್ನು ಒಂದು ಆಂದೋಲನದ ರೀತಿಯಲ್ಲಿ ಮಾಡುತ್ತಿದ್ದೇವೆ
ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಉತ್ತಮವಾದ ಮೂಲಭೂತ
ಸೌಲಭ್ಯ ಗಳನ್ನು ರಾಜ್ಯಕ್ಕೆ ತರುವ ಪ್ರಯತ್ನ ಮಾಡುತ್ತೇವೆ ಎಂದರಲ್ಲದೆ, ಹೊಸಕೋಟೆ ತಾಲ್ಲೂಕಿನ ಪ್ರಾಥಮಿಕ
ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವಂತಹ ಕೆಲಸ ಮಾಡುತ್ತೇನೆ ಎಂದರು.
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಖಾಯಿಲೆಗಳು ಬರದಂತೆ
ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಪ್ರತಿಯೊಬ್ಬರು ಎರಡು ಡೋಸ್ ಲಸಿಕೆ ಪಡೆಯಬೇಕು
ಎಂದರಲ್ಲದೆ, 895 ಜನರು ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುಣಮುಖರಾಗಿದ್ದು, ಅವರೆಲ್ಲರನ್ನೂ ಆಶಾಕಾರ್ಯಕರ್ತೆಯರು
ದೂರವಾಣಿ ಮೂಲಕ ಸಂಪರ್ಕಿಸಿ ತಪಾಸಣೆಗೆ ಒಳಪಡಿಸಬೇಕು ಎಂದರು.
ಪೌರಾಡಳಿತ, ಸಣ್ಣ ಕೈಗಾರಿಕೆಗಳು, ಮತ್ತು ಸಾರ್ವಜನಿಕ ವಲಯ
ಉದ್ಯಮಗಳ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜು(ಎಂ.ಟಿ.ಬಿ)
ಅವರು ಮಾತನಾಡಿ ಕೊರೋನಾ ಎಂಬ ಸಾಂಕ್ರಾಮಿಕ ರೋಗದ ಎರಡನೇ ಅಲೆ ಯಿಂದಾಗಿ ಸಾಕಷ್ಟು ಸಾವು- ನೋವುಗಳು
ರಾಜ್ಯದಲ್ಲಿ ಸಂಭವಿಸಿದ್ದು, ಹೊಸಕೋಟೆ ತಾಲ್ಲೂಕಿನಲ್ಲಿ ಸರಾಸರಿ 380 ಸಾವುಗಳು ಆಗಿವೆ. ಆ ಸಾವುಗಳಲ್ಲಿ
ಬಹಳಷ್ಟು ಜನ ತಂದೆ- ತಾಯಿಯನ್ನ ಕಳೆದುಕೊಂಡಿದ್ದು, ಕೆಲವು ಪೋಷಕರು ಮಕ್ಕಳನ್ನು ಸಹ ಕಳೆದುಕೊಂಡಿದ್ದಾರೆ.
ಇ ಸಮಯದಲ್ಲಿ ತಾಲ್ಲೂಕಿನ ಎಲ್ಲಾ ವೈದ್ಯಾಧಿಕಾರಿಗಳು, ಕೊರೋನ ವಾರಿಯರ್ಸ್, ಎಲ್ಲಾ ಇಲಾಖೆಯ ಅಧಿಕಾರಿಗಳು
ಪ್ರತಿನಿತ್ಯ 24 ಗಂಟೆಯು ಸಮರ್ಪಕವಾಗಿ ಕೆಲಸವನ್ನು
ಮಾಡಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ವೈದ್ಯಕೀಯ
ಸವಲತ್ತುಗಳ ಜೊತೆಗೆ ಈಗಾಗಲೇ ರಾಜ್ಯಕ್ಕೆ 2 ಕೋಟಿ 85 ಲಕ್ಷ ಲಸಿಕೆ ವಿತರಣಾ ಕಾರ್ಯಕ್ರಮವಾಗಿದೆ ಎಂದರು.
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಅವರು
ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಹಗಲು ರಾತ್ರಿ ಶ್ರಮವಹಿಸಿದ್ದರಿಂದ ರಾಜ್ಯದಲ್ಲಿ ಕೋವಿಡ್ ಸೋಂಕಿನ
ಪ್ರಮಾಣ ದಿನೇದಿನೇ ಕಡಿಮೆ ಆಗುತ್ತಿದೆ ಎಂದರಲ್ಲದೆ, ಗ್ರಾಮಾಂತರ ಜಿಲ್ಲೆಯಲ್ಲಿ ದಿನಕ್ಕೆ ಎರಡರಿಂದ
ಮೂರು ಪ್ರಕರಣಗಳು ವರಿದಿಯಾಗುತ್ತಿದ್ದು, ಈ ರೀತಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಆರೋಗ್ಯ
ಸಿಬ್ಬಂದಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಶ್ರಮವಿದೆ ಎಂದರು.
ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಕೋವಿಡ್ ನಿಂದ ಗುಣಮುಖರಾದವರಿಗೆ
ಮತ್ತೊಮ್ಮೆ ಕ್ಷಯ ರೋಗ ಪರೀಕ್ಷೆಗೆ ಒಳಪಡಿಸುವ ವಿನೂತನ ಆಲೋಚನೆಯನ್ನು ಸರ್ಕಾರ ಮಾಡಿದ್ದು, ಆರೋಗ್ಯ
ಸಚಿವರು ಹೋಸಕೋಟೆ ತಾಲ್ಲೂಕಿಗೆ ತಾಯಿ ಮತ್ತು ಮಗುವಿನ
ಆಸ್ಪತ್ರೆಗೆ ನಿರ್ಮಾಣಕ್ಕೆ ಒತ್ತು ನೀಡುತ್ತೇವೆ ಎಂದು ಹೇಳಿದ್ದಾರೆ ಎಂದರಲ್ಲದೆ, ಅದೇ ರೀತಿ ಸಬ್
ಡಿವಿಜನ್ ಸೆಂಟರ್ ನಲ್ಲಿ ಒಂದು ಆಸ್ಪತ್ರೆಯನ್ನು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ
ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿ ಡಾ. ತಿಪ್ಪೇಸ್ವಾಮಿ, ಹೊಸಕೋಟೆ ತಹಶೀಲ್ದಾರ್ ಗೀತಾ, ಸೂಲಿಬೆಲೆ ಪ್ರಾಥಮಿಕ ಆರೋಗ್ಯ
ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಲಾ.ಎನ್.ವಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ
ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ.
ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..