ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದ ಸಚಿವರಿಗೆ ತಾತ್ಕಾಲಿಕವಾಗಿ ಒಂದೊಂದು ಜಿಲ್ಲೆಯ ಉಸ್ತುವಾರಿ ನೀಡಿ, ಅಲ್ಲಿನ ಪ್ರವಾಹ ಪರಿಸ್ಥಿತಿ, ಕೋವಿಡ್ ಸ್ಥಿತಿಗಳ ನಿರ್ವಹಣೆ ಮಾಡುವಂತೆ ಸೂಚಿಸಿದ್ದರು. ಸಿಎಂ ಬೊಮ್ಮಾಯಿ ಅವರು ಸದಾಶಯದಿಂದ ಜವಾಬ್ದಾರಿ ನೀಡಿದರೆ, ಜವಾಬ್ದಾರಿ ಮರೆತ ಸಚಿವರು ತಮಗೆ ನಿಗದಿಪಡಿಸಿದ ಜಿಲ್ಲೆಯಲ್ಲಿ ವಿಜಯೋತ್ಸವ ಆಚರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬಿಜೆಪಿ ತನ್ನ ಇಮೇಜ್ ಬದಲಿಸಿಕೊಳ್ಳಲು ಮುಖ್ಯಮಂತ್ರಿಯನ್ನೇನೋ ಬದಲಿಸಿತು. ಆದರೆ, ಹಿಂದಿನ ಸರ್ಕಾರದ ಮಂತ್ರಿಮಂಡಲವನ್ನೇ ಬೊಮ್ಮಾಯಿ ಅವರಿಗೂ ನೀಡಿತು. ಅದೇ ಹಳೆ ಸಚಿವರು ಹೊಸದಾಗಿ ಪ್ರಮಾಣ ಸ್ವೀಕರಿಸಿ, ತಮ್ಮ ಅದೇ ಹಳೆ ಛಾಳಿಯನ್ನು ಮುಂದುವರಿಸಿದ್ದಾರೆ. ಇವರಿಗೆ ಜನರ ಸಂಕಷ್ಟ ಪರಿಹರವಾಗಬೇಕಿಲ್ಲ. ವಿಜಯೋತ್ಸವಗಳು ಬೇಕು, ಸನ್ಮಾನಗಳಾಗಬೇಕು.
ಹೊಸ ಸಚಿವರು ತಮಗೆ ನಿಗದಿ ಪಡಿಸಿದ ಜಿಲ್ಲೆಗಳಿಗೆ ಹೋದಾಗ ಮಾಡಿಸಿಕೊಂಡ ಸನ್ಮಾನಗಳು, ವಿಜಯೋತ್ಸವ, ಅದ್ದೂರಿ ಸ್ವಾಗತ ಕಂಡು ಜನ ನಾಚಿಕೆಪಟ್ಟಿದ್ದಾರೆ, ಮರುಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾದರೂ, ಸರ್ಕಾರ ಮತ್ತು ಅದರ ವರ್ತನೆ ಬದಲಾದ ಭಾವನೆ ಯಾರಲ್ಲಿಯೂ ಕಾಣುತ್ತಿಲ್ಲ. ಸಿಎಂ ಬದಲಾದರೆ ಸಾಲದು ಸಿಎಂ ರೀತಿಯೇ ಸಚಿವರೂ ನಡೆದುಕೊಳ್ಳಬೇಕು.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ, ನೆರೆ ಆತಂಕಗಳು ದೂರವಾಗಿಲ್ಲ. 3ನೇ ಅಲೆಯೊಂದು ಬಾಗಿಲ ಬಳಿಯಲ್ಲೇ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅದಕ್ಕೆ ಪೂರಕವೆಂಬಂತೆ ಕೋವಿಡ್ ಪ್ರಕರಣಗಳೂ ಏರುತ್ತಿವೆ. ನೆರೆ ಆತಂಕವೂ ದೂರವಾಗಿಲ್ಲ. ಸಚಿವ ಸ್ಥಾನ ಸಿಕ್ಕಿರಿವುದು ಸನ್ಮಾನ ಸ್ವೀಕರಿಸಲಲ್ಲ. ಸೇವೆ ನೀಡಲು ಎಂಬುದು ಈ ಮಂತ್ರಿ ಕೂಟಕ್ಕೆ ಅರಿವಾಗಲಿ ಎಂದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..