ದೊಡ್ಡಬಳ್ಳಾಪುರ: ದೇಶದಲ್ಲಿ ಕಲವೇ ಕಂಪನಿಗಳ ಮುಖ್ಯಸ್ಥರ ಸಂಪತ್ತು ಮಾತ್ರ ಬೃಹತ್ ಆಗಿ ಬೆಳೆಯುತ್ತಿದೆ. ದೇಶದ ದುಡಿಯುವ ವರ್ಗ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಗೆ ತಲುಪಿದೆ.ಹೀಗಾಗಿ ಇಡೀ ದೇಶದ ಜನರು ಕಾರ್ಪೊರೇಟ್ ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಹೇಳಿದರು.
ಸಿಐಟಿಯು,ಎಐಕೆಎಸ್ ಹಾಗೂ ಪ್ರಾಂತ ರೈತ ಸಂಘದ ವತಿಯಿಂದ ದೇಶವ್ಯಾಪಿ ಆರಂಭವಾಗಿರುವ ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಕಾರ್ಯಕ್ರಮದ ಅಂಗವಾಗಿ ಬುಧವಾರ ಬೀದಿ ಬದಿ ವ್ಯಾಪಾರಿಗಳ ಸಂಘದ ಸದಸ್ಯರಿಂದ ನಡೆದ ಪ್ರಚಾರಾಂದೋಲನದಲ್ಲಿ ಮಾತನಾಡಿದರು.
ಹೊಸ ಕಾರ್ಮಿಕ ನೀತಿಗಳು ಕಾರ್ಮಿಕರನ್ನು ಕೈಗಾರಿಕೋದ್ಯಮಿಗಳ ಜೀತಗಾರರಾನ್ನಾಗಿ ಪರಿವರ್ತಿಸುತ್ತಿವೆ. ಕೈಗಾರಿಕೋದ್ಯಮಿಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ, ಒಂದೆರಡು ಲಕ್ಷ ಸಾಲ ಪಡೆದ ರೈತರ ಮನೆ ಜಪ್ತಿ ಮಾಡುತ್ತಿದೆ. ಪ್ರತಿ ವರ್ಷ ಕೋಟಿ ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರ ಕೋಟ್ಯಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೀದಿಯಲ್ಲಿ ನಿಲ್ಲಿಸಿದೆ. ಲಕ್ಷಾಂತರ ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿವೆ ಎಂದರು.
ಇವತ್ತು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಕೇಳಿದರೆ ಅದು ದೇಶದ್ರೋಹವೆನಿಸುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕವಾದ ಬೆಳವಣಿಗೆ. 80 ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿಯವರು ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂದು ವಸಾಹತುಶಾಹಿ ಆಡಳಿತದ ವಿರುದ್ಧ ನಿರ್ಣಾಯಕ ಹೋರಾಟ ಮಾಡಿದ್ದರು. ಈಗ ನಾವು ಬಹುರಾಷ್ಟ್ರೀಯ ಕಂಪನಿಗಳ,ಶ್ರೀಮಂತರ ಪರವಾಗಿ ಇರುವ ನಮ್ಮದೇ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದರು.
ಪ್ರಚಾರಾಂದೋಲನದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘದ ಮುಖಂಡರಾದ ನರೇಶ್‌ಕುಮಾರ್,ಸಯ್ಯದ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..