ಬಾಗಲಕೋಟೆ: ಬೆಳಗಾವಿ ವಿಭಾಗ ಮಟ್ಟದಲ್ಲಿ ಸುರಿದ ಮಳೆ ಹಾಗೂ ಪ್ರವಾಹದಿಂದ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆ, ಸೇತುವೆ, ಬಾಂದಾರ ಸೇರಿದಂತೆ ಒಟ್ಟು 550 ಕೋಟಿ ರೂ.ಗಳ ಹಾನಿಯಾಗಿರುವುದಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಮುಧೋಳ ತಾಲೂಕಿನ ಪ್ರವಾಹ ಬಾಧಿತ ಗ್ರಾಮವಾದ ಮಿರ್ಜಿಯಲ್ಲಿ ಸುದ್ದಿಗಾರರೊಂದಿಗೆ ಈ ವಿಷಯ ತಿಳಿಸಿದ ಅವರು ಹಾನಿಗೊಳಗಾದ ರಸ್ತೆ ಸಂಪರ್ಕ ದುರಸ್ಥಿತಿಗಾಗಿ ತುರ್ತಾಗಿ ಮುಖ್ಯಮಂತ್ರಿಗಳಲ್ಲಿ 50 ಕೋಟಿ ರೂ.ಗಳನ್ನು ನೀಡುವಂತೆ ಮನವಿ ಮಾಡಲಾಗಿದೆ. ಅಲ್ಲದೇ ಮುಖ್ಯಮಂತ್ರಿಗಳ ವಚ್ರ್ಯೂವಲ್ ಸಭೆಯಲ್ಲಿಯೂ ಸಹ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು.ರಾಜ್ಯದಲ್ಲಿ ಕಳೆದ 2019-20ನೇ ಸಾಲಿನಲ್ಲಿ ಉಂಟಾದ ಪ್ರವಾಹದಿಂದ ಲೋಕೋಪಯೋಗಿ ಇಲಾಖೆಯಿಂದ ಒಟ್ಟು 7800 ಕೋಟಿ ರೂ.ಗಳ ನಷ್ಟವಾದರೆ 2020-21ನೇ ಸಾಲಿನಲ್ಲಿ ಒಟ್ಟು 3800 ಕೋಟಿ ರೂ.ಗಳ ನಷ್ಟವಾಗಿರುತ್ತದೆ. ಪ್ರಸಕ್ತ ವರ್ಷ ಮಳೆ ಹಾಗೂ ಪ್ರವಾಹದಿಂದ ಬೆಳಗಾವಿ ವಿಭಾಗ ಮಟ್ಟದಲ್ಲಿ ಒಟ್ಟು 550 ಕೋಟಿ ರೂ.ಗಳಷ್ಟು ನಷ್ಟವಾಗಿರುವುದಾಗಿ ಕಾರಜೋಳ ತಿಳಿಸಿದರು.
2019-20ನೇ ಸಾಲಿನಲ್ಲಿ 1008 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಅದಕ್ಕಾಗಿ 500 ಕೋಟಿ ರೂ.ಗಳ ವೆಚ್ಚ ಮಾಡಲಾಗಿದೆ. ಅವುಗಳಲ್ಲಿ ಕೆಲವೊಂದು ಪೂರ್ಣಗೊಂಡಿದ್ದು, ಉಳಿದವುಗಳು ಮುಕ್ತಾಯ ಹಂತದಲ್ಲಿರುತ್ತವೆ. ಅದೇ ರೀತಿ 2020-21ನೇ ಸಾಲಿನಲ್ಲಿ 1675 ಕಾಮಗಾರಿಗಳನ್ನು ಕೈಗೊಂಡಿದ್ದು, ಅದರಲ್ಲಿ 625 ಪೂರ್ಣಗೊಂಡಿರುತ್ತವೆ. ಶೇ.100ಕ್ಕೆ 90 ರಷ್ಟು ಕಾಮಗಾರಿಗಳು ಪೂರ್ಣಗೊಂಡಿರುವುದಾಗಿ ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ ಉಂಟಾದ ಹಾನಿಗೆ ಶಾಸ್ವತ ಪರಿಹಾರ ಕಂಡುಬೇಕಾಗಿದೆ. ಮಿರ್ಜಿ ಗ್ರಾಮದಲ್ಲಿ ಸಂತ್ರಸ್ಥರನ್ನು ಸಂಪೂರ್ಣ ಸ್ಥಳಾಂತರಿಸಲು ಜಾಗದ ಕೊರತೆ ಉಂಟಾಗಿದ್ದು, ಜಮೀನು ಎರಡು ಎಕರೆ ಜಮೀನು ಸಿಕ್ಕಲ್ಲಿ ಮನೆಗಳನ್ನು ಕಟ್ಟಿಕೊಡುವ ಮೂಲಕ ಸ್ಥಳಾಂತರಕ್ಕೆ ಕ್ರಮವಹಿಸಲಾಗುವುದು ಎಂದು ಕಾರಜೋಳ ತಿಳಿಸಿದರು.
ಪ್ರವಾಹ ಬಾಧಿತ ಪ್ರದೇಶಗಳಿಗೆ ಡಿಸಿಎಂ ಕಾರಜೋಳ ಭೇಟಿ: ಧಾರಾಕಾರವಾಗಿ ಸುರಿದ ಮಳೆ ಹಾಗೂ ಅತಿವೃಷ್ಟಿಯಿಂದ ಮುಧೋಳ ತಾಲೂಕಿನ ಬಾದಿತಗೊಳಗಾದ ಮಿರ್ಜಿ, ಆಲಗುಂಡಿ, ಬುದ್ನಿ ಬಿ.ಕೆ, ಮಾಚಕನೂರು, ಅಂತಾಪುರ ಒಂಟಗೋಡಿ, ಉತ್ತೂರು ಸೇರಿದಂತೆ ವಿವಿಧ ಬಾಧಿತ ಪ್ರದೇಶಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆ ಹಾನಿ, ಬೆಳೆ ಹಾನಿ, ರಸ್ತೆ, ಸೇತುವೆಗಳ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯನ್ನು ಪರಿಶೀಲನೆ ಮಾಡುವದರ ಜೊತೆಗೆ ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿದರು. ಸಂತ್ರಸ್ತರಿಗೆ ಕೂಡಲೇ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ, ಆರೈಕೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅತಿವೃಷ್ಠಿಯಿಂದ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಸುರಕ್ಷಿತ ಸ್ಥಳದಲ್ಲಿರುವಂತೆ ಮನವರಿಕೆ ಮಾಡಿಕೊಡಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಪ್ರಶಾತ, ಮುಧೋಳ ತಹಶೀಲ್ದಾರ ಬಾಡಗಿ ಸೇರಿದಂತೆ ಇತರರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..