ದೊಡ್ಡಬಳ್ಳಾಪುರ: ತಾಲೂಕಿನ ಜಿ.ಹೊಸಹಳ್ಳಿ ಪೊಲೀಸ್ ಠಾಣೆ ಎಎಸ್ಐ ಕೆ.ರಾಮಕೃಷ್ಣಯ್ಯ ನೇತೃತ್ವದಲ್ಲಿ ಅಪರಾಧ ತಡೆ ಮಾಸಾಚರಣೆ, ಮಾದಕ ದ್ರವ್ಯಗಳ ವಿರೋಧಿ ದಿನ ಹಾಗೂ ಸರಗಳ್ಳತನದ ಕುರಿತು ಜನಜಾಗೃತಿ ಮೂಡಿಸಲಾಯಿತು.
ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಹಳ್ಳಿ, ಗುಂಡಮಗೆರೆ, ಆರೂಢಿ, ಅಮಲಗುಂಟೆ, ಬನವತಿ ಮತ್ತಿತರ ಗ್ರಾಮಗಳಲ್ಲಿ ಅಪರಾಧ ತಡೆ, ಮಾದಕ ದ್ರವ್ಯಗಳಿಂದ ದೂರ ಉಳಿವುದು ಹಾಗೂ ಸರಗಳ್ಳತನದ ಕುರಿತು ಮಾಹಿತಿ ನೀಡಲಾಯಿತು.
ಈ ವೇಳೆ ಎಎಸ್ಐ ಕೆ.ರಾಮಕೃಷ್ಣಯ್ಯ ಮಾತನಾಡಿ, ಇಂದಿನ ಯುವ ಜನಾಂಗ ಆರಂಭದಲ್ಲಿ ಸಂತೋಷ, ವಿನೋದಕ್ಕಾಗಿ ಮಾದಕ ದ್ರವ್ಯ ಸೇವನೆ ಆರಂಭಿಸುತ್ತಾರೆ. ಅದು ಚಟವಾಗಿ ಬದುಕನ್ನೇ ನಾಶ ಮಾಡುವ ಮಟ್ಟಕ್ಕೆ ಬೆಳೆದು ನಿಲ್ಲುತ್ತದೆ. ಹಾಗಾಗಿ ಯುವಜನತೆ ಜಾಗೃತರಾಗಿರಬೇಕು ಎಂದರು.
ಅಪರಾಧಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಒಂಟಿ ಮಹಿಳೆ ಒಡವೆ ಧರಿಸಿ ಓಡಾಡುವುದರಿಂದ ಸರಗಳ್ಳತನ ಹೆಚ್ಚಾಗುತ್ತಿದೆ. ನಿರ್ಜನ ಪ್ರದೇಶದಲ್ಲಿ ಬೆಲೆ ಬಾಳುವ ಒಡವೆ ತೊಟ್ಟು ಓಡಾಡಬಾರದು.ದ್ವಿಚಕ್ರ ವಾಹನ ಮತ್ತು ಕಾರ್ ನಿಲ್ಲಿಸುವಾಗ ಸ್ಟೇರಿಂಗ್ ಲಾಕ್ ಹಾಗೂ ಡಬಲ್ ಲಾಕ್ ಹಾಕಬೇಕು. ಬಸ್ ನಿಲ್ದಾಣ, ಜನಜಂಗುಳಿ ಪ್ರದೇಶದಲ್ಲಿ ಪಿಕ್ ಪಾಕೇಟ್ ಕಳ್ಳರಿಂದ ಜಾಗ್ರತೆ ವಹಿಸುವುದು, ಎಟಿಎಂ ಕಾರ್ಡ್ ಹಿಂಬಾಗ ಪಾಸ್ವರ್ಡ್ ಬರೆಯಬಾರದು, ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಜಾಗ್ರತೆ ಮುಖ್ಯವಾಗಿದ್ದು, ಮಕ್ಕಳ ಕಳ್ಳರ ಬಗ್ಗೆ ನಿಗಾವಹಿಸಬೇಕಿದೆ. ಸಾರ್ವಜನಿಕವಾಗಿ ಅಪರಿಚಿತರು ಓಡಾಟದ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಅಪರಾಧ ತಡೆಗೆ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದರು.
ಈ ವೇಳೆ ಸಿಬ್ಬಂದಿಗಳಾದ ಸಂಚಿ ಬಸವನಗೌಡ, ಹೆಚ್.ಪಿ.ಮಣಿಕಂಠ, ರವಿಕುಮಾರ್, ಸುರೇಶ್ ರಾವ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..