ಹಾವೇರಿ: ಕೋವಿಡ್ ರೂಪಾಂತರ ತಳಿಯನ್ನಲಾದ ಡೆಲ್ಟಾ ಪ್ಲಸ್ ವೈರಸ್ ಮೇಲೆ ಸರ್ಕಾರ ತೀವ್ರ ನಿಗಾವಹಿಸಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.ಹಾವೇರಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಲ್ಲಿ ಮೊದಲು ಪತ್ತೆಯಾಗಿದ್ದು, ದೇಶದಲ್ಲಿಯೇ 35 ರಿಂದ 40 ಡೆಲ್ಟಾ ಪ್ರಕರಣಗಳು ಮಾತ್ರ ಪತ್ತೆಯಾಗಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಪ್ರಕರಣಗಳು ಕುರಿತಂತೆ ತೀವ್ರ ನಿಗಾ ವಹಿಸಲಾಗಿದೆ. ನಮ್ಮಲ್ಲಿ ಜಿನೋನ್ ಸೆಂಟರ್‍ಗಳಿದ್ದು, ಡೆಲ್ಟಾ ಪ್ಲಸ್ ಕುರಿತು ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ. ಈ ವೈರಸ್‍ನ ಬೇರೆ ಬೇರೆ ಪ್ರಕಾರಗಳು ಪರಿಣಾಮ ಹಾಗೂ ಈಗಿನ ವ್ಯಾಕ್ಸಿನ್ ಬಳಕೆಗಳ ಕುರಿತಂತೆ ಅಧ್ಯಯನ ನಡೆಸಲಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ನೀಡುವ ಸಲಹೆಗಳನ್ನು ನಿಯಮಾವಳಿಗಳನ್ನು ಪಾಲಿಸಲಾಗುವುದು ಎಂದು ಹೇಳಿದರು.
ಮೂರನೇ ಅಲೆ ಆರಂಭವಾಗುವ ಮುನ್ನ ಗರಿಷ್ಠ ಎಚ್ಚರಿಕೆಗಳೊಂದಿಗೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಕನಿಷ್ಠ 30 ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಯ ವಿಶೇಷ ಮಕ್ಕಳ ಐಸಿಯು ವಾರ್ಡ್ ಸಿದ್ಧತೆಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ರೋಗಿಗಳಿಲ್ಲದ ಕಾರಣ ಕೋವಿಡ್ ಕೇರ್ ಸೆಂಟರ್‍ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು. ಈ ಕೇಂದ್ರಗಳಿಗೆ ಪೂರೈಕೆ ಮಾಡಲಾದ ಸಾಮಗ್ರಿಗಳನ್ನು ಕಾಯ್ದಿರಿಸಿ ಮೂರನೇ ಅಲೆಯ ಸಂದರ್ಭದಲ್ಲಿ ಅಗತ್ಯಬಿದ್ದರೆ ಮಕ್ಕಳು ಹಾಗೂ ಪಾಲಕರಿಗಾಗಿ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ.
ಮೂರನೇ ಅಲೆ ಎದುರಿಸಲು ವ್ಯಾಕ್ಸಿನ್ ಪ್ರಮಾಣವನ್ನು ಹೆಚ್ಚಳಮಾಡುವುದು ಅಗತ್ಯವಿದೆ. ಪ್ರತಿದಿನ ಕನಿಷ್ಠ 10 ಸಾವಿರ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲು ಅಧಿಕಾರಿಗಳಿಗೆ ಗುರಿ ನೀಡಲಾಗಿದೆ. ಬೇಕಾದ ಪ್ರಮಾಣದ ವ್ಯಾಕ್ಸಿನ್ ಪೂರೈಕೆಗೆ ಕ್ರಮವಹಿಸಲಾಗುವುದು. ಜೊತೆಗೆ ಎಲ್ಲ ಕಾಲೇಜುಗಳಲ್ಲಿ ಉಪ ಸೆಂಟರ್ ಆರಂಭಿಸಿ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ವ್ಯಾಕ್ಸಿನ್ ನೀಡಲು ನೀಡಲಾಗುವುದು . ಇದಲ್ಲೇ ಮುಂಚೂಣಿ ವಾರಿಯರ್‍ಗಳಿಗೂ ವ್ಯಾಕ್ಸಿನ್ ನೀಡಲಾಗುವುದು.
ಮೊದಲ ಮತ್ತು ಎರಡನೇ ಡೋಸ್‍ನ ವ್ಯಾಕ್ಸಿನ ನಿಗಧಿತ ಅವಧಿಯಲ್ಲಿ ನೀಡಲು ಸೂಚನೆ ನೀಡಲಾಗಿದೆ. ಎರಡನೇ ಡೋಸ್ ವ್ಯಾಕ್ಸಿನ್ ಪಡೆಯಲು ಕಡ್ಡಾಯವಾಗಿ ಎಸ್.ಎಂ.ಎಸ್. ಸಂದೇಶ ರವಾನಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..