ದೊಡ್ಡಬಳ್ಳಾಪುರ: ನಗರದ ಸ್ವಾಮಿ ವಿವೇಕಾನಂದ ಶಾಲೆಯ ಹಳೆ ವಿದ್ಯಾರ್ಥಿ ಬಿ.ಸಿ.ರೇಖಾ ನೇತೃತ್ವದಲ್ಲಿ, ವಿವಿಧ ಖಾಸಗಿ ಶಾಲೆಗಳಲ್ಲಿ ಓದಿದ ಹಳೆ ವಿದ್ಯಾರ್ಥಿಗಳ ಆರ್ಥಿಕ ನೆರವಿನಿಂದ ಆಹಾರ ದಿನಸಿ ಕಿಟ್‌ಗಳನ್ನು ಖಾಸಗಿ ಶಾಲಾ ಶಿಕ್ಷಕ-ಶಿಕ್ಷಕಿಯರಿಗೆ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಸ್ವಾಮಿ ವಿವೇಕಾನಂದ ಶಾಲೆಯ ಬಿ.ಸಿ.ರೇಖಾ, ಕಾರ್ಮೆಲ್ ಜ್ಯೋತಿ ಶಾಲೆ ಎಲ್.ನೇತ್ರ, ಸ್ವಾಮಿ ವಿವೇಕಾನಂದ ಶಾಲೆಯ ಎನ್.ಸೀಮಾ ಮತ್ತು ಎನ್.ಶ್ಯಾಮಲ ಹಾಗು ನನ್ನ ಆರ್ಥಿಕ ನೆರವಿನೊಂದಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದೇವೆ. ನಮಗೆ ವಿದ್ಯೆ ನೀಡಿದ ಶಿಕ್ಷಕರಿಗೆ ಋಣ ತೀರಿಸುವಲ್ಲಿ ನಮಗೆ ಇದೊಂದು ಉತ್ತಮ ಅವಕಾಶವಾಗಿದೆ. ಹಳೆ ವಿದ್ಯಾರ್ಥಿಗಳಾದ ನಾವು ನಮ್ಮದೆ ಹಣದಿಂದ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸೇರಿದಂತೆ ಅಗತ್ಯವಾದ ದಿನಸಿ ಪರಿಕರಗಳನ್ನು ನಮ್ಮ ಗುರುಗಳಿಗೆ ನೀಡಿದ್ದೇವೆ. ಈ ಮೂಲಕ ನಮಗೆ ಪಾಠ ಹೇಳಿದ ಗುರುಗಳ ನೆರವಿಗೆ ಸದಾ ಇರುತ್ತೇವೆ.
ಕರೊನಾದಿಂದ ಖಾಸಗಿ ಶಾಲಾ ಶಿಕ್ಷಕರಿಗೆ ನಿಜಕ್ಕೂ ಕಷ್ಟದ ದಿನಗಳಾಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರವೂ ಸ್ಪಂದಿಸುತ್ತಿಲ್ಲ, ಬಹುತೇಕ ಖಾಸಗಿ ಶಾಲೆಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ಸರ್ಕಾರ ಇವರ ಕಡೆ ಅಗತ್ಯವಾಗಿ ಸ್ಪಂದಿಸುವುದು ಸರ್ಕಾರದ ಧರ್ಮ ಆಗಬೇಕು ಎಂದರು.
ಗ್ರಾಮಾಂತರ ವಿಭಾಗದ ಇನ್ಸ್‌ಪೆಕ್ಟರ್ ಸತೀಶ್ ಮಾತನಾಡಿ, ಸಂಕಷ್ಟದ ಕಾಲದಲ್ಲಿ ಪಾಠ ಹೇಳಿದ ಗುರುಗಳ ನೆರವಿಗೆ ಬಂದಿರುವ ಹಳೆಯ ವಿದ್ಯಾರ್ಥಿಗಳ ಸೇವಾ ಪರತೆ ಮಾದರಿಯಾಗಿದೆ. ಈ ಮೂಲಕ ಉನ್ನತ ಉದ್ಯೋಗದಲ್ಲಿರುವ ಹಳೆಯ ವಿದ್ಯಾರ್ಥಿಗಳು ತಮಗೆ ಪಾಠ ಹೇಳಿದ ಶಿಕ್ಷಕರ ನೆರವಿಗೆ ಬಂದರೆ ಇಂದಿನ ಈ ಸೇವಾ ಕಾರ್ಯಕ್ಕೆ ಮತ್ತಷ್ಟು ಮಹತ್ವ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಹಕಾರ: ಕಿಟ್ ವಿತರಣೆಗೆ ಕರವೇ ಕನ್ನಡಿಗರ ಬಣದ ದಾವಣಗೆರೆ ಜಿಲ್ಲಾಧ್ಯಕ್ಷ ಎಂ.ಸುರೇಶ್ ಹುಟ್ಟಹಬ್ಬಕ್ಕೆ ಆರ್ಥಿಕ ನೆರವು ನೀಡಿದ್ದರು. ಇದರೊಂದಿಗೆ ಕರವೇ ಕನ್ನಡಿಗರ ಬಣದ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಸೇರಿದಂತೆ ಅವರ ತಂಡವೂ ಕಿಟ್ ವಿತರಣೆಗೆ ಸಹಕಾರ ನೀಡಿತ್ತು.
ಈ ಸಂದರ್ಭದಲ್ಲಿ ಸಬ್‌ಇನ್ಸ್‌ಫೆಕ್ಟರ್ ಗೋವಿಂದ್, ಕರವೇ ಕನ್ನಡಿಗರ ಬಣದ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಎಸ್.ಚಂದ್ರಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್, ತಾಲೂಕು ಗೌರವ ಅಧ್ಯಕ್ಷ ಶಿವಶಂಕರಪ್ಪ ಸೇರಿದಂತೆ ಸಂಘಟನೆಯ ಮುಖಂಡರು ಪದಾಧಿಕಾರಿಗಳು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….