ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಿರುವುದರಿಂದ ಸೋಂಕು ನಿಯಂತ್ರಿಸುವ ಸಲುವಾಗಿ ತಾಲ್ಲೂಕಿನಾದ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಸಾರ್ವಜನಿಕರು ಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಚಿಕನ್, ಮಟನ್ ಮತ್ತು ಎಲ್ಲಾ ತರಹದ ಮಾಂಸದ ಅಂಗಡಿಗಳನ್ನು ಜೂನ್ 21ರವರೆಗೆ ಸಂಪೂರ್ಣವಾಗಿ ಮುಚ್ಚಬೇಕು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಬೆಳಿಗ್ಗೆ 8.00 ಗಂಟೆಯವರೆಗೆ ಮಾತ್ರ ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಅಗತ್ಯ ಸೇವೆಗಳಲ್ಲದ ಅಂಗಡಿಗಳು ಬೆಳಿಗ್ಗೆ 10.00 ಗಂಟೆ ನಂತರ ತೆರೆದಿದ್ದಲ್ಲಿ, ಆ ಅಂಗಡಿಗಳಿಗೆ ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳಿಂದ ದಂಡ ವಿಧಿಸಲಾಗುವುದು. ಅಲ್ಲದೇ ಮೆಕಾನಿಕ್ ಅಂಗಡಿಗಳು ಬೆಳಿಗ್ಗೆ 10.00 ಗಂಟೆಯ ನಂತರ ಸಹ ತೆಗೆದಿರುವುದು ಕಂಡುಬಂದಲ್ಲಿ ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಅವರುಗಳಿಗೆ ದಂಡವನ್ನು ವಿಧಿಸಲಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ನಾಕಾಬಂದಿಯನ್ನು ಹಾಕಲಿದ್ದು, ಅನಗತ್ಯವಾಗಿ ಓಡಾಡುವವರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುವುದರ ಜೊತೆಯಲ್ಲಿ ಅವರ ಮೇಲೆ ಕ್ರಮ ಜರುಗಿಸಲಾಗುವುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಜೂನ್ 14ರಿಂದ 21ರ ವರೆಗೆ ಇರುವ ಸಂತೆ, ಜಾತ್ರೆ, ಮೆರವಣಿಗೆ, ಸಮಾವೇಶ, ಸಮ್ಮೇಳನ, ಕ್ರೀಡಾಕೂಟ ಹಾಗೂ ಇತರೆ ಯಾವುದೇ ಧಾರ್ಮಿಕ ಸಮಾರಂಭಗಳು, ಬೇಸಿಗೆ ಶಿಬಿರ, ಪ್ರವಾಸ ಸ್ನೇಹ ಸಮ್ಮೇಳನ, ಸಂಗೀತ ಸಮ್ಮೇಳನ, ನಾಟಕೋತ್ಸವ ವಿಚಾರಗೋಷ್ಠಿ ಮುಂತಾದವುಗಳ ಮೇಲಿರುವ ನಿಷೇಧಾಜ್ಞೆ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲೂ ಮುಂದುವರಿಯಲಿದೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….