ಬೆಂ.ಗ್ರಾ.ಜಿಲ್ಲೆ: ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆಯಿಂದ ಆರ್ಥಿಕವಾಗಿ ಸಂಕಷ್ಟಕ್ಕೊಳಗಾದ 11 ವಲಯಗಳಲ್ಲಿನ ಅಸಂಘಟಿತ ಕಾರ್ಮಿಕರಿಗೆ ರೂ. 2000ಗಳ ಪರಿಹಾರ ಧನವನ್ನು ರಾಜ್ಯ ಸರ್ಕಾರ ಘೋಷಿಸಿದ ಹಿನ್ನೆಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸದಾಗಿ ಸೇರ್ಪಡೆಯಾಗಬೇಕಿರುವ ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ಕರ್ನಾಟಕ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಇಲ್ಲಿಯವರೆಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 1074 ಕಾರ್ಮಿಕರು ನೋಂದಾಯಿಸಿದ್ದು, ಫಲಾನುಭವಿಗಳು ಸರ್ಕಾರವು ಘೋಷಿಸಿರುವ ಪರಿಹಾರ ಧನ ಪಡೆಯಲು ಪ್ರತ್ಯೇಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
2021ನೇ ಸಾಲಿನಲ್ಲಿ ಸರ್ಕಾರವು 11 ವಲಯದ ಅಸಂಘಟಿತ ಕಾರ್ಮಿಕರಿಗೆ ರೂ.2000 ಪರಿಹಾರ ಧನ ಘೋಷಿಸಿದ್ದು, ಇಲ್ಲಿಯವರೆಗೆ 831 ಕ್ಷೌರಿಕರು, 744 ಅಗಸರು ಒಟ್ಟು 1575 ಫಲಾನುಭವಿಗಳಿಗೆ ರೂ. 2000ಗಳನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ. ಉಳಿದ 9 ವಲಯದ ಕಾರ್ಮಿಕರಾದ ಗೃಹ ಕಾರ್ಮಿಕರು, ಅಕ್ಕಸಾಲಿಗರು, ಹಮಾಲಿಗಳು, ಚಿಂದಿ ಆಯುವವರು, ಕುಂಬಾರರು, ಮೆಕ್ಯಾನಿಕ್ ಗಳು, ಮಂಡಕ್ಕಿಭಟ್ಟಿ ಕಾರ್ಮಿಕರು, ಕಮ್ಮಾರರು ಹಾಗೂ ಟೈಲರ್ ಗಳು ಸೇವಾ ಸಿಂಧು ತಂತ್ರಾಂಶದ ಮೂಲಕ ರೂ. 2000ಗಳ ಪರಿಹಾರಧನ ಪಡೆಯಲು ಅರ್ಜಿ ಸಲ್ಲಿಸಬಹುದು.
ಜಿಲ್ಲೆಯ 37,000 ಕಟ್ಟಡ ಕಾರ್ಮಿಕರಲ್ಲಿ, ಕಳೆದ ಸಾಲಿನಲ್ಲಿ ಕೇವಲ 3500 ಜನರಿಗಷ್ಟೇ ಬ್ಯಾಂಕ್ ಖಾತೆ ಮೂಲಕ ಪರಿಹಾರಧನ ನೀಡಲಾಗಿದ್ದು, ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಿದ್ದಲ್ಲಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಮಾಹಿತಿಯನ್ನು ಅಪ್ಲೋಡ್ ಮಾಡಲಾಗುವುದು ಹಾಗೂ ಬ್ಯಾಂಕ್ ಖಾತೆ ಇಲ್ಲವೆಂದಲ್ಲಿ ಶೂನ್ಯ ಖಾತೆಯೊಂದನ್ನು ತೆರೆಯಲು ಸಹ ಕಾರ್ಮಿಕ ಇಲಾಖೆಯವರು ನೆರವಾಗಲಿದ್ದಾರೆ.
ಅಗತ್ಯ ಮಾಹಿತಿ, ಬ್ಯಾಂಕ್ ಖಾತೆ ವಿವರಗಳನ್ನು ಕಾರ್ಮಿಕ ನಿರೀಕ್ಷಕರಿಗೆ ಸಲ್ಲಿಸುವ ಮೂಲಕ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….