ಹರಿತಲೇಖನಿ ವಿಶೇಷ: ದಕ್ಷ ಐಎಎಸ್ ಅಧಿಕಾರಿ, ಕೋಲಾರದ ಮಾಜಿ ಜಿಲ್ಲಾಧಿಕಾರಿ ಡಿ ಕೆ ರವಿ (ದೊಡ್ಡಕೊಪ್ಪಲು ಕರಿಯಣ್ಣ ರವಿ) ಅವರು ಇಂದು ಬದುಕ್ಕಿದ್ದರೆ 42ನೇ ಜನ್ಮದಿನದ ಸಂಭ್ರಮದಲ್ಲಿರುತ್ತಿದ್ದರು.
ಆತ್ಮಹತ್ಯೆಯೋ ಅಥವಾ ಇನ್ನೊಂದೋ ಒಟ್ಟಿನಲ್ಲಿ ಆಗಬಾರದ್ದು ಆಗಿ ಹೋಗಿ,ರಾಜ್ಯ ಒಬ್ಬ ದಕ್ಷ ಅಧಿಕಾರಿಯನ್ನು ಕಳೆದುಕೊಂಡಿದೆ ಎನ್ನುವುದು ನಾವು ಒಪ್ಪಿಕೊಳ್ಳಬೇಕಾದ ವಾಸ್ತವತೆ.
ಸತ್ತವನು ಮತ್ತೆ ಬದುಕಿಬರಲಾರ ಎನ್ನುವುದು ಒಪ್ಪಿಕೊಳ್ಳುವ ಮಾತಾದರೂ ರವಿ ಅಸಹಜ ಸಾವಿನ ಸುತ್ತಮುತ್ತ ಇರಬಹುದಾದ ಅನುಮಾನ ನಾಡಿನ ಜನರದಲ್ಲಿ ಹಾಗೆಯೇ ಉಳಿದು ಓಗಿದೆ.
ಫೈರ್ ಬ್ರಾಂಡ್: ಐಎಎಸ್ ವಲಯದಲ್ಲಿ ಫೈರ್ ಬ್ರಾಂಡ್ ಎಂದೇ ಹೆಸರಾಗಿದ್ದ ಡಿ ಕೆ ರವಿ, ಹೋದಲೆಲ್ಲಾ ಜನಾನುರಾಗಿಯಾಗಿ ಕಾರ್ಯ ನಿರ್ವಹಿಸಿದವರು. ಭೂ ಮತ್ತು ಮರಳು ಮಾಫಿಯಾಗಳಿಗೆ ಸಿಂಹಸ್ವಪ್ನರಾಗಿದ್ದರು ರವಿ
ಡಿ.ಕೆ.ರವಿ ಅವರು ಜೂ.10.1979ರಲ್ಲಿ ಕುಣಿಗಲ್ ತಾಲೂಕು ಹುಲಿಯೂರುದುರ್ಗ, ದೊಡ್ಡೆಕೊಪ್ಪಲು ಗ್ರಾಮದಲ್ಲಿ ಕರಿಯಣ್ಣ ಮತ್ತು ಗೌರಮ್ಮ ದಂಪತಿಗಳಿಗೆ ಜನಿಸಿದ್ದರು.
ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ, ಬೆಂಗಳೂರು ವಿವಿಯಲ್ಲಿ ಪ್ರಾಣಿಶಾಸ್ತ್ರದ ಪದವೀಧರರಾಗಿದ್ದರು. ಅಬಕಾರಿ ಇಲಾಖೆಯ ಸಬ್ ಇನ್ ಸ್ಪೆಕ್ಟರ್ ಆಗಿ ಕೆಲಸ ಮಾಡಿದ ರವಿ ಮುಂದೆ ಯುಪಿಎಸ್ಸಿ ಪರೀಕ್ಷೆ ಬರೆಯಲು ಈ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಐಎಎಸ್ ಆಯ್ಕೆ: ಯುಪಿಎಸ್ಸಿ ಪರೀಕ್ಷೆ ಪಾಸಾದ ನಂತರ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿ (2009ರ ಬ್ಯಾಚ್) ಆಯ್ಕೆಯಾದರು. ಕಲ್ಬುರ್ಗಿಯಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಆರಂಭಿಸಿದ ಡಿ.ಕೆ.ರವಿ, ನಂತರ ಕೊಪ್ಪಳ ಜಿಲ್ಲಾಪಂಚಾಯತ್ ಸಿಇಓ ಆಗಿ ಕೆಲಸ ನಿರ್ವಹಿಸಿದರು. ಇದಾದ ನಂತರ ಕೋಲಾರದ ಜಿಲ್ಲಾಧಿಕಾರಿಯಾಗಿ ಜನಮನ್ನಣೆಗಳಿಸಿದ್ದರು.
ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನ: 14 ತಿಂಗಳ ಕಾಲ ಕೋಲಾರದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ರವಿ ಅವರು, ಜಮೀನು ಒತ್ತುವಾರಿಗಳ ವಿರುದ್ದ, ಮರಳು ಸಾಗಾಣೆಕೆಗಾರರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡಿದ್ದರು.
ಕೋಲಾರ ಜಿಲ್ಲೆಯಲ್ಲಿ ಕೆಎಎಸ್ ಮತ್ತು ಅಭ್ಯರ್ಥಿಗಳಿಗೆ ಪಾಠ ಮಾಡುತ್ತಿದ್ದ ರವಿ, ದಲಿತ ಮಹಿಳೆಯ ಮನೆಯಲ್ಲಿ ಸಹಪಂಕ್ತಿ ಭೋಜನ ಸೇವಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದರು.
ವಿರೋಧ ಕಟ್ಟಿಕೊಂಡಿದ್ದ ರವಿ: ಡಿಸಿಯಾಗಿ ಮಾಫಿಯಾಗಳ ವಿರೋಧ ಕಟ್ಟಿಕೊಂಡಿದ್ದ ರವಿ ಅವರನ್ನು ಸರಕಾರ ಕೋಲಾರದಿಂದ ವರ್ಗಾವಣೆ ಮಾಡಿತ್ತು. ಕೋಲಾರದ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್ನುವಂತೆ ಸಾರ್ವಜನಿಕರಿಂದ ಇದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ಅಲ್ಲಿಂದ ಅವರು ವಾಣಿಜ್ಯ ಇಲಾಖೆಗೆ ವರ್ಗಾವಣೆಗೊಂಡರು.
ವಾಣಿಜ್ಯ ಇಲಾಖೆಯಲ್ಲಿ ಸಂಚಲನ: ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಾಲ್ಕು ತಿಂಗಳಲ್ಲಿ ಕೋಟ್ಯಾಂತರ ರೂ ತೆರಿಗೆ ಬಾಕಿ ವಸೂಲಿ ಮಾಡಿದ್ದರು.
ಬ್ರಿಗೇಡ್ ಗ್ರೂಪ್, ಮಂತ್ರಿ ಗ್ರೂಪ್, ಎಂಬೆಸಿ, ಗೋಲ್ಡನ್ ಗೇಟ್ ಪ್ರಾಪರ್ಟೀಸ್, RMZ, ಶುಭ್ ಜ್ಯೂವೆಲ್ಲರ್ಸ್ ಮತ್ತು ರಾಜ್ಯದ ಕ್ಯಾಬಿನೆಟ್ ಸಚಿವರ ಒಡೆತನದ ಎನ್ನಲಾದ ರಿಯಲ್ ಎಸ್ಟೇಟ್ ಕಚೇರಿ ಸೇರಿದಂತೆ ಹಲವು ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದರು.
ರವಿಯವರ ದುರಂತ ಸಾವು: ನಾವು ಎಷ್ಟು ದಿನ ಬದುಕಿದ್ದೇವೆ ಎನ್ನುವುದಕ್ಕಿಂತ ಬದುಕಿದ್ದಾಗ ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ಬದುಕಿದ್ದರೆ ಹುಲಿಯಂತೆ ಬದುಕಬೇಕು. ನಮಗೆ ಸಿಕ್ಕ ಅಧಿಕಾರವನ್ನು ಜನರ ಹಿತರಕ್ಷಣೆಗೆ ಬಳಸಿಕೊಳ್ಳೋಣ ಎಂದು ಕೆಲವು ದಿನಗಳ ಹಿಂದೆಯಷ್ಟೇ ಕಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದ್ದ ಡಿಕೆ ರವಿ ಆತ್ಮಹತ್ಯೆಗೆ ಶರಣಾದರು ಎಂಬ ಸುದ್ದಿ ಇಡೀ ನಾಡಿಗೆ ಬರ ಸಿಡಿಲಿನಂತೆ ಬಡಿದಿತ್ತು.
ನಾಡು ಕಂಡ ದಕ್ಷ ಐಎಎಸ್ ಅಧಿಕಾರಿ, ಕೋಲಾರದ ಮಾಜಿ ಜಿಲ್ಲಾಧಿಕಾರಿ ಡಿ ಕೆ ರವಿ (ದೊಡ್ಡಕೊಪ್ಪಲು ಕರಿಯಣ್ಣ ರವಿ) ಅವರು ಬದುಕ್ಕಿದ್ದರೆ 42ನೇ ಜನ್ಮದಿನದ ಸಂಭ್ರಮದಲ್ಲಿರುತ್ತಿದ್ದರು. (ಸಂಗ್ರಹ ಚಿತ್ರಗಳನ್ನು ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….