ದೊಡ್ಡಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ18 ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಎಂದು ಭಾನುವಾರ ಘೋಷಿಸಿದ್ದಾರೆ. ಆದರೆ ಪ್ರಧಾನಿ ಉಚಿತ ಲಸಿಕೆ ಘೋಷಣೆ ಬೆನ್ನಲ್ಲೆ ಶಾಸಕ ಟಿ.ವೆಂಕಟರಮಣಯ್ಯ ಸುಪ್ರಿಂ ಕೋರ್ಟ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದು ಬಹಳಷ್ಟು ಚರ್ಚೆಗೆ ಕಾರಣವಾಗಿದೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಜೂ.21ರಂದು ಅಂತರರಾಷ್ಟ್ರೀಯ ಯೋಗ ದಿವಸ. ಆ ದಿನದಿಂದ 18 ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆದಿಯಾಗಿ ಶಾಸಕ ಟಿ.ವೆಂಕಟರಮಣಯ್ಯ ಸುಪ್ರಿಂ ಕೋರ್ಟಿಗೆ ಧನ್ಯವಾದಗಳು ಎಂದಿದ್ದಾರೆ.
ಈ ಕುರಿತು ಶಾಸಕ ಟಿ.ವೆಂಕಟರಮಣಯ್ಯ ಹರಿತಲೇಖನಿಯೊಂದಿಗೆ ಮಾತನಾಡಿ, ಉಚಿತ ಲಸಿಕೆ ಘೋಷಣೆ ಪ್ರಧಾನಿ ಮೋದಿ ಅವರ ಆಡಳಿತದ ನಿರ್ಣಯವಲ್ಲ, 45 ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಉಚಿತ ಲಸಿಕೆ ನೀಡುವ ಮತ್ತು ಆ ವಯಸ್ಸಿಗಿಂತ ಕೆಳಗಿನ(18-44) ವಯೋಮಾನದವರಿಗೆ ಲಸಿಕೆಗಾಗಿ ಪಾವತಿಸುವ ವ್ಯವಸ್ಥೆಯ ಕೇಂದ್ರದ ಲಸಿಕಾ ನೀತಿಯು “ಮೇಲ್ನೋಟಕ್ಕೆ ಇದು ಅಸಮರ್ಪಕ ಕಾರ್ಯವೈಖರಿಯಂತಿದೆ’ ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಚಾಟಿ ಬೀಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪ್ರಮಾಣಗಳ ಕೊರತೆಯ ವಿಷಯ ಹಾಗೂ ಹಲವಾರು ನ್ಯೂನತೆಗಳನ್ನು ಎತ್ತಿ ತೋರಿಸಿದ ನ್ಯಾಯಾಲಯವು, ತನ್ನ ಲಸಿಕಾ ನೀತಿಯನ್ನು ಪರಿಶೀಲಿಸಲು ಮತ್ತು “ಡಿಸೆಂಬರ್ 31, 2021 ರವರೆಗೆ ಲಸಿಕೆಗಳ ಲಭ್ಯತೆಯ ಮಾರ್ಗಸೂಚಿಯನ್ನು ದಾಖಲಿಸುವಂತೆ” ಕೇಂದ್ರಕ್ಕೆ ಆದೇಶಿಸಿದೆ.
ಭಾರತದಲ್ಲಿ ಲಭ್ಯವಿರುವ ಲಸಿಕೆಗಳ ಬೆಲೆಯನ್ನು ಅಂತಾರಾಷ್ಟ್ರೀಯ ಬೆಲೆಗಳಿಗೆ ಹೋಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ. ಭಾರತದಲ್ಲಿ, 18-44 ವರ್ಷ ವಯಸ್ಸಿನವರು ಲಸಿಕೆಗಳಿಗೆ ದುಬಾರಿ ಬೆಲೆಯನ್ನು ಪಾವತಿಸುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಹೆಚ್ಚಿನ ರಾಷ್ಟ್ರಗಳಲ್ಲಿ, ಲಸಿಕೆಗಳನ್ನು ಸರ್ಕಾರಗಳು ಸಂಗ್ರಹಿಸಿ ಜನರಿಗೆ ಯಾವುದೇ ವೆಚ್ಚವಿಲ್ಲದೆ ವಿತರಿಸುತ್ತಿವೆ.
ವ್ಯಾಕ್ಸಿನೇಷನ್ ಸಮಸ್ಯೆಯನ್ನು “ಸಂಪೂರ್ಣವಾಗಿ ನಿರ್ಣಾಯಕ” ಎಂದು ಕರೆದ ನ್ಯಾಯಾಲಯ, ಪ್ರಸ್ತುತ 18-44 ವರ್ಷ ವಯಸ್ಸಿನ ಜನರು ಕೇವಲ ಸೋಂಕಿಗೆ ಒಳಗಾಗುತ್ತಿರುವುದಲ್ಲ, ಸೋಂಕಿನ ತೀವ್ರ ಪರಿಣಾಮಗಳಿಂದ ಬಳಲುತ್ತಿದ್ದಾರೆ ಎಂದು ಪರೋಕ್ಷವಾಗಿ ಕೇಂದ್ರದ ಲಸಿಕಾ ನೀತಿಯ ಬಗ್ಗೆ ಚಾಟಿ ಏಟು ಕೊಟ್ಟಿದ್ದ ಕಾರಣ, ಕೇಂದ್ರ ಸರ್ಕಾರ ಉಚಿತ ಲಸಿಕೆಯ ಘೋಷಣೆ ಮಾಡಿದೆ. ಇದು ನ್ಯಾಯಲಯಕ್ಕೆ ಸಲ್ಲಬೇಕಾದ ಪ್ರಶಂಸೆಯೇ ಹೊರತು ಕೇಂದ್ರ ಸರ್ಕಾರಕ್ಕಲ್ಲ.
ದೇಶದಲ್ಲಿ ಈ ಹಿಂದೆಯೂ ಹಲವಾರು ಸಾಂಕ್ರಾಮಿಕ ರೋಗಗಳು ಕಾಡಿದೆ. ಆ ಸಂದರ್ಭದಲ್ಲಿನ ಸರ್ಕಾರಗಳು ದೇಶದ ಜನತೆಗೆ ಉಚಿತ ಲಸಿಕೆಯನ್ನೇ ನೀಡಿವೆ. ಜನತೆಗೆ ಉಚಿತ ಆರೋಗ್ಯ, ಶಿಕ್ಷಣ, ನೀರು ನೀಡಬೇಕಾದ್ದು ಆಡಳಿತಾರೂಢ ಪಕ್ಷದ ಕರ್ತವ್ಯ ಎಂದು ವೆಂಕಟರಮಣಯ್ಯ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….