ಬೆಂಗಳೂರು: ಸರಕು ಸಾಗಣೆ ಅಂಕಿ ಅಂಶಗಳಲ್ಲಿ ಭಾರತೀಯ ರೈಲ್ವೆ ವೇಗ ಕಾಯ್ದುಕೊಂಡಿದ್ದು, 2021ರ ಮೇ ನಲ್ಲಿ ಕೋವಿಡ್ ಸವಾಲುಗಳ ಹೊರತಾಗಿಯೂ ಗಳಿಕೆ ಮತ್ತು ಲೋಡಿಂಗ್ ನಲ್ಲಿ ಉತ್ತಮ ಸಾಧನೆ ಮಾಡಿದೆ.
ಅಭಿಯಾನದ ಮಾದರಿಯಲ್ಲಿ ರೈಲ್ವೆ ಕಾರ್ಯನಿರ್ವಹಿಸುತ್ತಿದ್ದು, ಮೇ ತಿಂಗಳಲ್ಲಿ ಭಾರತೀಯ ರೈಲ್ವೆ ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ ಲೋಡಿಂಗ್ ಮಾಡಿದೆ.
2021 ರ ಮೇ ನಲ್ಲಿ 114.8 ಮೆಟ್ರಿಕ್ ಟನ್ ಸರಕು ಸಾಗಣೆ ಮಾಡಿದ್ದು, ಕಳೆದ 2019 ರ ಇದೇ ಮೇ ಗೆ ಹೋಲಿಸಿದರೆ ಶೇ 9.7 ರಷ್ಟು [104.6 ಮೆಟ್ಟಿಕ್ ಟನ್] ಪ್ರಗತಿ ಸಾಧಿಸಿದೆ.
2021 ರ ಮೇ ನಲ್ಲಿ ಪ್ರಮುಖ ವಸ್ತುಗಳನ್ನು ಸಾಗಣೆ ಮಾಡಿದ್ದು, ಅದರಲ್ಲಿ 54.52 ದಶಲಕ್ಷ ಟನ್ ಕಲ್ಲಿದ್ದಲು, 15.12 ದಶಲಕ್ಷ ಟನ್ ಕಬ್ಬಿಣದ ಅದಿರು, 5.61 ದಶಲಕ್ಷ ಟನ್ ಆಹಾರ ಧಾನ್ಯಗಳು, 3.68 ದಶಲಕ್ಷ ಟನ್ ರಸಗೊಬ್ಬರ, 3.18 ದಶಲಕ್ಷ ಟನ್ ಖನಿಜ ತೈಲ, 5.36 ದಶಲಕ್ಷ ಟನ್ ಸೀಮೆಂಟ್ [ಕ್ಲಿಂಕೆರ್ ಹೊರತುಪಡಿಸಿ] ಮತ್ತು 4.2 ದಶಲಕ್ಷ ಟನ್ ಕ್ಲಿಂಕೆರ್ ಸಾಗಾಟ ಮಾಡಿದೆ.
2021 ರ ಮೇನಲ್ಲಿ ಭಾರತೀಯ ರೈಲ್ವೆ 11604.94 ಕೋಟಿ ರೂಪಾಯಿ ಆದಾಯವನ್ನು ಸರಕು ಸಾಗಣೆಯಿಂದ ಗಳಿಸಿದೆ.
2021ರ ಮೇ ನಲ್ಲಿ ವ್ಯಾಗನ್ ಟರ್ನ್ ನಲ್ಲಿ ಶೇ 26 ರಷ್ಟು ಸುಧಾರಣೆ ಕಂಡಿದ್ದು, 2018 ರ ಮೇ ನಲ್ಲಿ ವ್ಯಾಗನ್ ಟರ್ನ್ ಗೆ 6.46 ದಿನಗಳನ್ನು ತೆಗೆದುಕೊಳ್ಳಲಾಗಿತ್ತು. ಈ ಪ್ರಮಾಣ ಇದೀಗ 4.81 ದಿನಗಳಿಗೆ ತಗ್ಗಿದೆ.
ರೈಲ್ವೆ ಸರಕು ಸಾಗಣೆಯನ್ನು ಅತ್ಯಾಕರ್ಷಕಗೊಳಿಸಲು ಭಾರತೀಯ ರೈಲ್ವೆ ಹಲವಾರು ವಿನಾಯಿತಿ ಮತ್ತು ರಿಯಾಯಿತಿಗಳನ್ನು ನೀಡುತ್ತಿದೆ. ಹಾಲಿ ಇರುವ ರೈಲ್ವೆ ಸಂಪರ್ಕಜಾಲದಲ್ಲಿ ಸರಕು ಸಾಗಣೆ ರೈಲುಗಳ ವೇಗವನ್ನು ಸಹ ಹೆಚ್ಚಿಸಲಾಗಿದೆ. ರೈಲುಗಳ ವೇಗದಲ್ಲಿ ಆಗಿರುವ ಸುಧಾರಣೆಯಿಂದ ಎಲ್ಲಾ ಪಾಲುದಾರರಿಗೆ ವೆಚ್ಚ ಕಡಿತವಾಗಲಿದೆ. ಕಳೆದ 18 ತಿಂಗಳ ಅವಧಿಯಲ್ಲಿ ಸರಕು ಸಾಗಿಸುವ ರೈಲುಗಳ ವೇಗ ದ್ವಿಗುಣಗೊಂಡಿದೆ.
ಕೆಲವು ವಲಯಗಳಲ್ಲಿ [ನಾಲ್ಕು ವಲಯಗಳು] ಸರಕು ಸಾಗಣೆ ರೈಲುಗಳ ವೇಗ 50 ಕಿಲೋಮೀಟರ್ ಗಿಂತ ಹೆಚ್ಚಾಗಿದೆ. ಭೌಗೋಳಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೆಲವು ವಲಯಗಳಲ್ಲಿ ಸರಕು ಸಾಗಣೆ ರೈಲುಗಳು ಉತ್ತಮ ವೇಗ ಕಾಯ್ದುಕೊಂಡಿವೆ. 2021 ರ ಮೇ ನಲ್ಲಿ ಸರಾಸರಿ ವೇಗ 45.6 ಕಿಲೋಮೀಟರ್ ಇದೆ.ಇದಕ್ಕೂ ಹಿಂದಿನ ವರ್ಷ 36.19 ಕಿಲೋಮೀಟರ್ ನಷ್ಟಿದ್ದು,ಶೇ 26 ರಷ್ಟು ಪ್ರಗತಿ ಸಾಧಿಸಿದೆ.
ಕೋವಿಡ್ – 19 ಪರಿಸ್ಥಿತಿಯನ್ನು ಭಾರತೀಯ ರೈಲ್ವೆ ಒಂದು ಅವಕಾಶವನ್ನಾಗಿ ಮಾಡಿಕೊಂಡಿದ್ದು,ಎಲ್ಲಾ ಹಂತದಲ್ಲೂ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಆದ್ಯತೆ ನೀಡಿದೆ.(ಸಂಗ್ರಹ ಚಿತ್ರಗಳನ್ನು ಬಳಸಲಾಗಿದೆ.)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….