ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ, ಕೋವಿಡ್-19 ಸೋಂಕು ದೃಡಪಟ್ಟಿದ್ದ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆ ಮಾಡಿದ್ದು ತಾಯಿ ಮತ್ತು ಮಗು ಕ್ಷೇಮವಾಗಿರುವ ವರದಿ ತಡವಾಗಿ ಬೆಳಕಿಗೆ ಬಂದಿದೆ.
ಕೋವಿಡ್ ಸೋಂಕು ದೃಢಪಟ್ಟಿದ್ದ ಉಜ್ಜನಿ ಗ್ರಾಮದ ಗರ್ಭಿಣಿ (ಮಾಹಿತಿ ಗೌಪ್ಯವಾಗಿಡಲಾಗಿ) ಯೋರ್ವರಿಗೆ ಶನಿವಾರ ನಡು ರಾತ್ರಿ ಹೆರಿಗೆ ನೋವು ಕಂಡು ಬಂದಿದ್ದು, ಪೋಷಕರು ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಸ್ಟಾಫ್ ನರ್ಸ್ ಜಯಮ್ಮ, ಬಚ್ಚಹಳ್ಳಿ ಕೋವಿಡ್ ಕೇರ್ ಸೆಂಟರ್ ಗೆ ಕರ್ತವ್ಯಕ್ಕೆ ತೆರಳಿದ್ದ ಹೊಸಹಳ್ಳಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶ್ವೇತಾ ನಾಯ್ಕ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ನಡು ರಾತ್ರಿ ಗರ್ಭಿಣಿಯ ಕರೆದೊಯ್ಯಲು ಉಂಟಾಗಬಹುದಾದ ಸಮಸ್ಯೆ ಗ್ರಹಿಸಿದ ಡಾ.ಶ್ವೇತಾ ನಾಯ್ಕ್ ಪಿಪಿಇ ಕಿಟ್ ಧರಿಸಿ ಹೆರಿಗೆ ಮಾಡಲು ಸೂಚಿಸಿದ್ದಾರೆ.
ಸತತ ಎರಡು ಗಂಟೆಗಳ ಕಾಲ ಡಾ.ಶ್ವೇತಾ ನಾಯ್ಕ್ ಮೊಬೈಲ್ ಮೂಲಕವೇ ಸಲಹೆ / ಸೂಚನೆಗಳನ್ನು ನೀಡುತ್ತಾ ಯಶಸ್ವಿಯಾಗಿ ಹೆರಿಗೆ ಕಾರ್ಯ ನಡೆಸಿದ್ದು, ಹೆಣ್ಣು ಮಗು ಜನಿಸಿದೆ.
ಕೋವಿಡ್ ಸೋಂಕು ದೃಢಪಟ್ಟಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿದ ಹಿನ್ನಲೆಯಲ್ಲಿ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಿಸಲಾಗಿದೆ. ಸಮಯ ಪ್ರಜ್ಞೆ ಮೇರೆದು ತಾಯಿ ಹಾಗೂ ಮಗುವಿನ ಜೀವ ಉಳಿಸಿದ ಹೊಸಹಳ್ಳಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶ್ವೇತಾ ನಾಯ್ಕ್ ಹಾಗೂ ಸ್ಟಾಫ್ ನರ್ಸ್ ಜಯಮ್ಮ ಅವರ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….