ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುತ್ತಿದ್ದು, ಶಾಸಕರು ಹಾಗೂ ಅಧಿಕಾರಿಗಳು ಸಹಕರಿಸಿ, ಕೋವಿಡ್‌ನಿಂದಾಗುವ ಸಾವು-ನೋವುಗಳನ್ನು ಕಡಿಮೆ ಮಾಡಿ ಕರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಬೇಕು ಎಂದು ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ್ ತಿಳಿಸಿದರು.
ಇಂದು ಜೂಮ್ ಆ್ಯಪ್ ಮೂಲಕ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೋವಿಡ್-19 ಸ್ಥಿತಿಗತಿ ಬಗ್ಗೆ ಹಾಗೂ ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಈಗಾಗಲೇ ಲಸಿಕೆ ಕೊರತೆಯನ್ನು ನೀಗಿಸಲು ಬೇರೆ ಬೇರೆ ದೇಶಗಳಿಂದ ಲಸಿಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ತ್ವರಿತವಾಗಿ ಈ ಕೆಲಸ ಸಂಪೂರ್ಣವಾಗಿ ಆಗಲಿದೆ ಎಂದು ತಿಳಿಸಿದರು ಅಲ್ಲದೆ, ಆಕ್ಸಿಜನ್‌ಗೆ ಸಂಬಂಧಿಸಿದ ಉಪಕರಣಗಳ (ಎಕ್ವಿಪ್ ಮೆಂಟ್ಸ್) ಸಂಗ್ರಹವಿದ್ದು, ಕೇಂದ್ರ ಸರ್ಕಾರದಿಂದ ಆಕ್ಸಿಜನ್ ಬಂದ ಕೂಡಲೇ ಆಕ್ಸಿಜನ್ ಬೇಡಿಕೆ ನೀಗಿಸಲು ಪ್ರಯತ್ನ ಮಾಡಲಾಗುವುದು ಎಂದರು.
ದೊಡ್ಡಬಳ್ಳಾಪುರದಲ್ಲಿ 100 ಹಾಸಿಗೆಯ ಕೋವಿಡ್ ಆಸ್ಪತ್ರೆ ನಿರ್ಮಾಣಕ್ಕೆ ಎಲ್ಲಾ ಸಿದ್ಧತೆಗಳು ನಡೆದಿದ್ದು, ಅತೀ ಶೀಘ್ರದಲ್ಲಿ ಇದರ ಅನುಕೂಲ ಪಡೆದುಕೊಳ್ಳಬಹುದು ಎಂದು ಹೇಳಿದರು.
ಹೋಂ ಐಸೋಲೇಶನ್ ನಲ್ಲಿರುವ
ಕೋವಿಡ್ ಸೋಂಕಿತರಿಗೆ ಜಿಲ್ಲಾಧಿಕಾರಿಯವರ ಹಂತದಲ್ಲಿಯೇ ವೈದ್ಯಕೀಯ ಸಿಬ್ಬಂದಿಗಳ ನೆರವಿನಿಂದ ಔಷಧಗಳ ಕಿಟ್ ಅನ್ನು ವಿತರಿಸಲು ಈಗಾಗಲೇ ನಿರ್ದೇಶನ ನೀಡಲಾಗಿದ್ದು, ಹೋಂ ಐಸೋಲೇಶನ್ ಆಯ್ಕೆ ಮಾಡಿಕೊಳ್ಳುವ ಸೋಂಕಿತರಿಗೆ
ಕೋವಿಡ್ ಸೋಂಕಿತರು ಎಂದು ವರದಿ ಬಂದ ಎರಡು ಗಂಟೆಯೊಳಗೆ
ಔಷಧಿಯ ಕಿಟ್ ಅನ್ನು ವಿತರಿಸಲು
ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದು ತಿಳಿಸಿದರು.
ಕೋವಿಡ್-19 ರೋಗದಿಂದ ಮೃತಪಟ್ಟವರ ಶವಗಳನ್ನು ದಹನ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಯಾ ತಾಲ್ಲೂಕುಗಳಲ್ಲಿ ಇರುವಂತಹ ಗೋಮಾಳ ಅಥವಾ ಖರಾಬು ಜಮೀನುಗಳನ್ನು ಗುರುತಿಸಿ, ಎರಡು ತಿಂಗಳ ಮಟ್ಟಿಗೆ ತಾತ್ಕಾಲಿಕ ಚಿತಾಗಾರವನ್ನು ನಿರ್ಮಿಸಲು ಎಲ್ಲಾ ಶಾಸಕರು ಹಾಗೂ ಅಧಿಕಾರಿಗಳು ಮೂರು ದಿನಗಳೊಳಗೆ ವ್ಯವಸ್ಥೆ ಮಾಡಬೇಕು ಸೂಚಿಸಿದರು.
ಈಗಾಗಲೇ ಬೆಂಗಳೂರು ನಗರದ ಹೊರವಲಯದಲ್ಲಿ ಸುಮಾರು 5 ತಾತ್ಕಾಲಿಕ ಚಿತಾಗಾರಗಳ ವ್ಯವಸ್ಥೆ ಮಾಡಲಾಗಿರುವುದರಿಂದ ಶವಗಳನ್ನು ದಹನ ಮಾಡಲು ತಡಮಾಡದೇ ವ್ಯವಸ್ಥಿತವಾಗಿ ಅನುವು ಮಾಡಿಕೊಡಲಾಗಿದ್ದು, ಜನರು ಪರದಾಡುವುದು ತಪ್ಪಿದೆ. ಅದೇ ಮಾದರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಆಯಾ ತಾಲ್ಲೂಕುಗಳಲ್ಲಿಯೂ ತಾತ್ಕಾಲಿಕ ಚಿತಾಗಾರಗಳ ವ್ಯವಸ್ಥೆ ಮಾಡಲು ಕ್ರಮ ವಹಿಸಬೇಕು ಎಂದರು.
ಪೌರಾಡಳಿತ ಮತ್ತು ಸಕ್ಕರೆ ಸಚಿವರಾದ ಎನ್.ನಾಗರಾಜು (ಎಂ.ಟಿ.ಬಿ) ಮಾತನಾಡಿ, ವೈದ್ಯಕೀಯ ಪದವಿ ಮತ್ತು ನರ್ಸಿಂಗ್‌ನ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್-19 ಕೇರ್ ಸೆಂಟರ್‌ಗಳಲ್ಲಿ, ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ತಾತ್ಕಾಲಿಕವಾಗಿ ನೇಮಿಸಿಕೊಂಡು, ಪ್ರೋತ್ಸಾಹಧನ ನೀಡಲು ಘೋಷಿಸುವುದರಿಂದ ಸಿಬ್ಬಂದಿ ಕೊರತೆ ನೀಗಿಸಬಹುದು ಎಂದು ಸಲಹೆ ನೀಡಿದರು.
ಹೊಸಕೋಟೆ ತಾಲ್ಲೂಕಿನ 350 ಹಾಸಿಗೆ ವ್ಯವಸ್ಥೆ ಇರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೇವಲ 60 ಹಾಸಿಗೆ ಮಾತ್ರ ಭರ್ತಿಯಾಗಿದೆ. ಹಲವಾರು ಕೊರೋನಾ ಸೋಂಕಿತರು ಮನೆಯಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿರುವುದರಿಂದ, ಮನೆಯ ಇತರ ಸದಸ್ಯರಿಗೂ ಸೋಂಕು ತಗಲುತ್ತಿದೆ. ಕೋವಿಡ್ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಹೊಸಕೋಟೆ ತಾಲ್ಲೂಕಿನಲ್ಲಿ ಒಂದು ಮೆಡಿಕಲ್ ಕಾಲೇಜು ಇದ್ದು, ಎಂವಿಜೆ ಮೆಡಿಕಲ್ ಕಾಲೇಜಿನಲ್ಲಿ ಶೇ. 25% ರಷ್ಟು ಬೆಡ್‌ಗೆ ಅವಕಾಶ ಮಾಡಿಕೊಟ್ಟಿದ್ದು, ತಾಲ್ಲೂಕಿನ ಕೋವಿಡ್-19 ರೋಗಿಗಳಿಗೆ ಬೆಡ್ ಸರಿಯಾಗಿ ಸಿಗುತ್ತಿಲ್ಲ. ಇದರಿಂದಾಗಿ ಹಾಸಿಗೆ ಮೀಸಲಾತಿ ಪ್ರಮಾಣ ಶೇ.50% ಗೆ ಏರಿಸಿ, ಸ್ಥಳೀಯರಿಗೆ ಅವಕಾಶ ಮಾಡಿಕೊಡಬೇಕಾಗಿ ಸಚಿವರಲ್ಲಿ ಮನವಿ ಮಾಡಿಕೊಂಡರು.
ಕೋವಿಡ್-19 ನಿಯಂತ್ರಣಕ್ಕೆ ಅಧಿಕಾರಿಗಳು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದರೊಂದಿಗೆ ಕೋರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಬೇಕು ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರು ಮಾತನಾಡಿ, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಆಕಾಶ್ ಹಾಗೂ ಸಿದ್ದಾರ್ಥ ಆಸ್ಪತ್ರೆಯಲ್ಲಿ ತಲಾ 25 ಹಾಸಿಗೆ ನೀಡಬೇಕು, ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಲು ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ಭತ್ಯೆ ನೀಡಿ ನೆಮಕಕ್ಕೆ ತ್ವರಿತವಾಗಿ ಅವಕಾಶ ನೀಡಬೇಕಿದೆ. ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಘಟಕ್ಕೆ ಒತ್ತಾಯ, ತಾಲೂಕಿನಲ್ಲಿ ವಿದ್ಯುತ್ ಚಿತಾಗಾರ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು. ಇದೇ ವೇಳೆ ತಾಲ್ಲೂಕಿಗೆ 100 ಹಾಸಿಗೆಯ ಕೋವಿಡ್ ಆಸ್ಪತ್ರೆ ನಿರ್ಮಿಸಲು ತಾಲೂಕಿನಲ್ಲಿ ಆಸ್ಪತ್ರೆ ಆವರಣದಲ್ಲಿ ಅವಕಾಶ ಮಾಡಿಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಆತ್ರೇಯ ಆರ್ಯುವೇದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ 100 ಹಾಸಿಗೆಗೆ ಪರವಾನಗಿ ತೆಗೆದುಕೊಂಡಿದ್ದು, ಜಿಲ್ಲಾಧಿಕಾರಿ ಅವರೊಂದಿಗೆ ಪರಿಶೀಲನೆ ನಡೆಸಿದಾಗ ಯಾವುದೇ ಹಾಸಿಗೆ ವ್ಯವಸ್ಥೆ ಮಾಡದ ಕಾರಣ ಪರವಾನಗಿಯನ್ನು ರದ್ದು ಮಾಡಲಾಯಿತು, ಇಲ್ಲಿನ ವೈದ್ಯಕೀಯ ಸಿಬ್ಬಂದಿಗಳನ್ನು ಕೋವಿಡ್ ಕಾರ್ಯಕ್ಕೆ ನೇಮಿಸಲಾಗಿದೆ ಎಂದರಲ್ಲದೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶ್ರೀನಿವಾಸಮೂರ್ತಿ ಅವರು ಮಾತನಾಡಿ ನೆಲಮಂಗಲ ತಾಲ್ಲೂಕಿಗೆ 20 ICU ಬೆಡ್, 50 HDU ಬೆಡ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಚಿವರ ಗಮನಕ್ಕೆ ತಂದಾಗ ಪ್ರತಿಕ್ರಿಯಿಸಿದ ಸಚಿವರು ಆಕ್ಸಿಜನ್ ಪ್ರಮಾಣದ ಆಧಾರದ ಮೇಲೆ ಐಸಿಯು ಬೆಡ್ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು.
ನೆಲಮಂಗಲ ತಾಲ್ಲೂಕಿನ ಆಸ್ಪತ್ರೆಗಳಿಗೆ ರೆಮ್ಡಿಸಿವಿರ್ ಇಂಜೆಕ್ಷನ್ ಹಾಗೂ 2 ವೆಂಟಿಲೇಟರ್ ಬೆಡ್ ವ್ಯವಸ್ಥೆ ಅತೀ ಶೀಘ್ರವಾಗಿ ಮಾಡಿಕೊಡಲು ಸಚಿವರಲ್ಲಿ ಮನವಿ ಮಾಡಿದರು.
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ ಅವರು ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಶೇ.25% ರಷ್ಟು ಹಾಸಿಗೆ ವ್ಯವಸ್ಥೆ ಹಾಗೂ ನಗರ ಪ್ರದೇಶದ ಜನರಿಗೆ ಶೇ. 75 ರಷ್ಟು ಹಾಸಿಗೆ ವ್ಯವಸ್ಥೆ ಮಾಡಿರುವುದರಿಂದ, ನಮ್ಮ ಸ್ಥಳೀಯ ಜನರಿಗೆ ಹಾಸಿಗೆ ಸಮಸ್ಯೆ ಉಂಟಾಗಿದೆ. ಸ್ಥಳೀಯರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ಹೇಳಿದರು.
ಹೊಸಕೋಟೆ ತಾಲ್ಲೂಕಿಗೆ ವೆಂಟಿಲೇಟರ್, ಆಕ್ಸಿಜನ್, ರೆಮ್ಡಿಸಿವಿರ್ ಇಂಜೆಕ್ಷನ್, ಐಸಿಯು ಬೆಡ್ ವ್ಯವಸ್ಥೆಯನ್ನು ತಡಮಾಡದೇ ಒದಗಿಸಿಕೊಡಲು ಸಚಿವರಲ್ಲಿ ಮನವಿ ಮಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೋವಿಡ್-19 ನಿರ್ವಹಣೆ ಕುರಿತು ಪಿ.ಪಿ.ಟಿ.ಪ್ರಸೆಂಟೇಶನ್ ಮೂಲಕ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಗಣೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ಸೇರಿದಂತೆ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…