ದೊಡ್ಡಬಳ್ಳಾಪುರ: ಅಕ್ಕನನ್ನು ಪ್ರೀತಿಸಿದ್ದಕ್ಕೆ ಕೋಪಗೊಂಡ ಪ್ರಜ್ವಲ್ ಎಂಬಾತ ಸ್ನೇಹಿತರೊಂದಿಗೆ ಸೇರಿ ಬೆಂಗಳೂರಿನ ವಿಜಯನಗರ ನಿವಾಸಿ ಪಿ.ಚೇತನ್(20) ಎಂಬಾತನನ್ನು ಅ.2 ರಂದು ಕೊಲೆ ಮಾಡಿ ತಾಲ್ಲೂಕಿನ ಹೊನ್ನಾಘಟ್ಟ ಕೆರೆ ಅಂಗಳದ ಗಿಡಗಳ ಪೊದೆಯಲ್ಲಿ ಬಿಸಾಡಿ ಹೋಗಿದ್ದ ಪ್ರಕರಣದಲ್ಲಿ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಬಿ.ನವೀನ್‌ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿ,ಕೆರೆ ಅಂಗಳದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ದೊರೆತಾಗ ಆರೋಪಿಗಳ ಬಗ್ಗೆ ಖಚಿತವಾದ ಯಾವುದೇ ಮಾಹಿತಿ ದೊರೆತಿರಲಿಲ್ಲ. ಆದರೆ ಬೆಂಗಳೂರಿನ ಅನ್ನಪೂರ್ಣೇಶ್ವರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದ ವ್ಯಕ್ತಿಯ ಬಟ್ಟೆ, ಭಾವ ಚಿತ್ರದ ಗುರುತುಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್, ಡಿವೈಎಸ್‌ಪಿ ಟಿ.ರಂಗಪ್ಪ ಅವರ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಳಿಸಿ ಕೊಲೆ ನಡೆದ ಒಂದು ವಾರದ ಒಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ಈಗ ಬಂಧಿತರಾಗಿರುವ ಆರೋಪಿಗಳು ತಾಲ್ಲೂಕಿನ ರಾಜಘಟ್ಟ ಗ್ರಾಮದ ಎಸ್.ಹೇಮಂತ್, ಪಾಲನಜೋಗಿಹಳ್ಳಿ ನಿವಾಸಿಗಳಾದ ಜಿ.ಟಿ.ತಿಮ್ಮರಾಜು, ಎಂ.ಪ್ರವೀಣ್, ಬೆಂಗಳೂರಿನ ಕಾಮಾಕ್ಷಿಪಾಳ್ಯದ ವಾಸೀಪ್, ಎಸ್.ನಿಖಿಲ್, ಶಾರದ ಕಾಲೋನಿ ನಿವಾಸಿ ಎಸ್.ನವೀನ್, ಮೀನಾಕ್ಷಿನಗರದ ನಿವಾಸಿ ಸಂಜೇಯ್.
ಫೇಸ್‌ಬುಕ್ ಕಾಮೆಂಟ್ ದ್ವೇಷಕ್ಕೆ ಕಾರಣ: ಹೊನ್ನಾಘಟ್ಟ ಕೆರೆ ಅಂಗಳದಲ್ಲಿ ನಡೆದ ಚೇತನ್ ಕೊಲೆ ಮೇಲ್ನೋಟಕ್ಕೆ ಅಕ್ಕನನ್ನು ವಿವಾಹವಾಗಿದ್ದೇ ಪ್ರಮುಖ ಕಾರಣವಾಗಿದೆ. ಆದರೆ ಈ ಕೊಲೆಯ ಸಂಚಿನಲ್ಲಿ ಏಳು ಜನರು ಒಂದಾಗಿರುವುದೇ ಚೇತನ್ ಫೇಸ್ ಬುಕ್‌ನಲ್ಲಿ ಕಾಮೆಂಟ್ ಹಾಕಿದ್ದು ಸಹ ಒಂದು ಕಾರಣವಾಗಿದೆ ಎನ್ನಲಾಗಿದೆ.
ಚೇತನ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ಆರೋಪಿಗಳು 18 ರಿಂದ 24 ವರ್ಷದ ಒಳಗಿನವರೇ ಆಗಿದ್ದಾರೆ. ಈ ವಯಸ್ಸಿನವರು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಒಂದಿಷ್ಟು ಎಚ್ಚರ ತಪ್ಪಿದರು ಸಹ ಇಡೀ ಜೀವನವೇ ದುರಂತಮಯವಾಗಲಿದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ಮಗನನ್ನು ಉಳಿಸಿಕೊಡಿ: ಚೇತನ್ ಕೊಲೆ ಪ್ರಕರಣದಲ್ಲಿ ಈಗ ಬಂಧಿತರಾಗಿರುವ ಏಳು ಜನರ ಪೈಕಿ ಒಬ್ಬಾತನ ತಾಯಿ ‘ನನ್ನ ಮಗ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹೇಳಿಕೊಂಡು ಪಶ್ಚಾತಾಪ ಪಟ್ಟಿದ್ದಾನೆ. ಬೆಂಗಳೂರಿನಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತ ಮಕ್ಕಳನ್ನು ಸಾಕುತ್ತಿದ್ದೇನೆ. ಗಂಡ ಮೃತಪಟ್ಟು ಹಲವಾರು ವರ್ಷಗಳಾಗಿವೆ. ಲಾಕ್‌ಡೌನ್ ನಂತರ ಮನೆ ಬಾಡಿಗೆ ಕಟ್ಟುವುದೇ ಕಷ್ಟವಾಗಿದೆ. ಇಂತಹ ಕಷ್ಟದ ಸಂದರ್ಭದಲ್ಲೂ ಮಕ್ಕಳನ್ನು ಸಾಕುತ್ತಿರುವೆ. ಸ್ನೇಹಿತರ ಸಹವಾಸದಿಂದ ನನ್ನ ಮಗ ತಪ್ಪು ಮಾಡಿದ್ದಾನೆ. ಹೇಗಾದರು ಮಾಡಿ ನನ್ನ ಮಗ ಜೈಲಿಗೆ ಹೋಗುವುದನ್ನು ತಪ್ಪಿಸಲು ಸಹಾಯ ಮಾಡಿ. ಇಲ್ಲವೆ ಹೆಚ್ಚು ದಿನ ನನ್ನ ಮಗ ಜೈಲಿನಲ್ಲಿ ಇರದಂತೆ ಸಹಾಯ ಮಾಡಿ’ ಎಂದು ಆರೋಪಿಯನ್ನು ಬಂಧಿಸಲು ಮನೆ ಬಳಿಗೆ ಹೋಗಿದ್ದಾಗ ತಾಯಿಯೊಬ್ಬರು ಪೊಲೀಸರನ್ನು ಅಂಗಲಾಚಿ ಕೇಳಿಕೊಂಡರಂತೆ.
ಈಗ ಮಾಡಿರುವ ತಪ್ಪೇ ದೊಡ್ಡದಾಗಿದೆ. ಜೈಲಿನಲ್ಲಿ ಹೆಚ್ಚು ದಿನಗಳ ಕಾಲ ಬಂಧಿಯಾಗಿದ್ದರೆ ಮತ್ತಷ್ಟು ದೊಡ್ಡ ಅಪರಾಧಗಳನ್ನು ಮಾಡುವುದನ್ನು ಕಲಿತು ಬರುತ್ತಾನೋ ಎನ್ನುವ ಆತಂಕ ಆ ತಾಯಿಯದ್ದಾಗಿತ್ತು ಎಂದು ಪೊಲೀಸರೊಬ್ಬರು ತಿಳಿಸಿದ್ದಾರೆ.