ದೊಡ್ಡಬಳ್ಳಾಪುರ: ಅಪಹರಣ ಮಾಡಿ ಭೂಮಿ ನೊಂದಾವಣೆ ಮಾಡಿಸಿಕೊಂಡವರಿಗೆ ರಕ್ಷಣೆ ನೀಡುತ್ತಿರುವ ಸಚಿವ ಆರ್.ಅಶೋಕ್ ಅವರನ್ನು ಈ ಕೂಡಲೇ ಮುಖ್ಯಮಂತ್ರಿಗಳು ಸಂಪುಟದಿಂದ ಕೈ ಬಿಡಬೇಕೆಂದು ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು.
ಬಿಬಿಎಂಪಿ ವ್ಯಾಪ್ತಿಯ ಸಿಂಗಾಪುರದಲ್ಲಿ ಸುಮಾರು 10 ಕೋಟಿ ಬೆಲೆಯ 1.20 ಎಕರೆ ಭೂಮಿ ದೊಡ್ಡಬಳ್ಳಾಪುರ ತಾಲ್ಲೂಕಿನ ಎಸ್.ಎಂ.ಗೊಲ್ಲಹಳ್ಳಿಯ ಮುನಿಯಪ್ಪ ಮತ್ತವರ ಸಹೋದರರಿಗೆ ಸೇರಿದ್ದಾಗಿದ್ದು, ಕಂದಾಯ ಸಚಿವ ಆರ್.ಅಶೋಕ್ ಅವರ ಆಪ್ತ ಮುನಿಯಪ್ಪ ಅವರ ಸಹೋದರರನ್ನು 2013 ರಲ್ಲಿ ಅಪಹರಣ ಮಾಡಿ ಈ ಭೂಮಿಯನ್ನು ಬಲವಂತವಾಗಿ ಖರೀದಿ ಮಾಡಿದ್ದು ಈ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದೆ ಎಂದ ಅವರು ಕಂದಾಯ ಸಚಿವ ಆರ್.ಅಶೋಕ್ ಅವರ ಆಪ್ತ ಬಿ.ಎಂ.ರಂಗಸ್ವಾಮಿ ಅವರು ಈ ಭೂಮಿಯನ್ನು ಕಬಳಿಸಲು ಸಂಚು ಮಾಡಿ ದಿನಾಂಕ ಆ.17 ರಂದು ಭೂಮಿಯ ಮಾಲಿಕರಾದ ಮುನಿಯಪ್ಪ ಅವರನ್ನು ತಮ್ಮ ಹಿಂಬಾಲಕರ ಮೂಲಕ ಅಪಹರಣ ಮಾಡಿಸಿ ಬೆದರಿಕೆ ಹಾಕಿ ಒಪ್ಪಿಗೆ ಪತ್ರ ಮಾಡಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ ಅವರು ಸಂಬಂಧಿಪಟ್ಟಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆರೋಪಿಗಳನ್ನು ಈ ವರೆಗೆ ಪೊಲೀಸರು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಆರ್.ಅಶೋಕ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು ಪೊಲೀಸರು ಸಹ ಸಚಿವರ ಆಪ್ತ ಬಿ.ಎಂ.ರಂಗಸ್ವಾಮಿ ಅವರಿಗೆ ಬೆಂಬಲ ನೀಡುತ್ತಿದ್ದು ಆರೋಪಿಗಳ ಬಂಧನಕ್ಕೆ ಒಂದು ವಾರದ ಗಡುವು ನೀಡುತ್ತಿದ್ದೇವೆ ಹಾಗೆಯೇ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಿ ಘಟನೆಯ ಪಾರದರ್ಶಕ ತನಿಖೆಗೆ ಸಹಕಾರ ನೀಡಬೇಕು ತಪ್ಪಿದರೆ ನಮ್ಮ ಪಕ್ಷದ ವತಿಯಿಂದ ಮುಖ್ಯಮಂತ್ರಿಗಳ ಮನೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಭೂಮಿಯ ಮಾಲಿಕರಾದ ಬಿ.ಮುನಿಯಪ್ಪ ರಾಜಣ್ಣ ಮತ್ತು ಮುನೇಗೌಡ ಅವರುಗಳು ಮಾತನಾಡಿ, ನಮ್ಮ ತಾಯಿಯ ತವರು ಮನೆಯ 3 ಎಕರೆ ಭೂಮಿಯಲ್ಲಿ ಹೆಣ್ಣು ಮಕ್ಕಳಿಗೆ 1-20 ಎಕರೆ ಪಾಲು ಬಂದಿದ್ದು, ನಮ್ಮ ಮಾವನವರ 1-20 ಎಕರೆ ಭೂಮಿಯನ್ನು ಇದೇ ರಂಗಸ್ವಾಮಿ ಅವರು ಖರೀದಿ ಮಾಡಿದ್ದು ಹೆಣ್ಣು ಮಕ್ಕಳಿಗೆ ಬಂದಿರುವ ಭೂಮಿಯನ್ನು ರಂಗಸ್ವಾಮಿ ಅವರು ಕಬಳಿಸಲು ಸಂಚು ಮಾಡಿದ್ದು ನಮಗೆ ಪೊಲೀಸರ ಮೂಲಕ ಬೆದರಿಕೆ ಹಾಕಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ನಮಗೆ ಹಿಂಸೆ ಮಾಡುತ್ತಿದ್ದು ಈ ಹಿಂಸೆಯಿಂದ ಮನನೊಂದು ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ನೋವಿನಲ್ಲಿರುವ ನಮ್ಮನ್ನು ಅಪಹರಿಸಿ ನೊಂದಾವಣಿ ಮಾಡಿಕೊಂಡಿದ್ದಾರೆ ಆದರೂ ಪೊಲೀಸರು ಆರೋಪಿಗಳನ್ನು ಬಂದಿಸಿಲ್ಲ ಎಂದು ತಮ್ಮ ನೋವು ತೋಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ BSP ಯ ರಾಜ್ಯ ಕಾರ್ಯದರ್ಶಿಗಳಾದ ಬಸವರಾಜು, ನಂದಿಗುಂದ ಪಿ.ವೆಂಕಟೇಶ್, ನ್ಯಾಯವಾದಿ ಮುನಿಕೃಷ್ಣ ಮುಂತಾದವರು ಉಪಸ್ಥಿತರಿದ್ದರು.