ದೊಡ್ಡಬಳ್ಳಾಪುರ: ದೇಶದ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ “ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ” ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಮನಸ್ಸನ್ನು ಅರಿತು, ಅವರನ್ನು ಪ್ರಗತಿಯತ್ತ ಕೊಂಡೊಯ್ಯುವ ನೇತಾರ ಶಿಕ್ಷಕರು ಮಾತ್ರ. ತಾಯಿ ಹೇಗೆ ತನ್ನ ಮಗುವಿಗೆ ಜನ್ಮ ನೀಡುತ್ತಾಳೋ ಹಾಗೆಯೇ ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ದಾರಿ ದೀಪವಾಗಿರುತ್ತಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಮಾತನಾಡಿ ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಕೊಂಡೊಯ್ಯವ ಗುರುಗಳನ್ನು ಇಂದು ನೆನಯಲು ಮಹಾದಿನವಾಗಿದೆ. ಡಾ: ಸರ್ವಪಲ್ಲಿ ರಾಧಾಕೃಷ್ಣ ನ್ ರವರ ಮಹಾನ್ ಚಿಂತನೆ ಅವರ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.
ಒಂದು ದೇಶದ ಅಭಿವದ್ಧಿಯನ್ನು ಅಳೆಯಲು ಅಲ್ಲಿನ ಜನಸಂಖ್ಯೆ ಹಾಗೂ ಶಿಕ್ಷಣ ಹೊಂದಿರುವ ಸಂಖ್ಯೆಗೆ ಅನುಗುಣವಾಗಿ ಅಲ್ಲಿನ ಅಭಿವೃದ್ಧಿ ಹಾಗೂ ಪ್ರಗತಿಯನ್ನು ಅಂದಾಜು ಮಾಡಲಾಗುತ್ತದೆ. ಹೀಗೆ ಶಿಕ್ಷಣ ಎಂಬುದು ಪ್ರತಿಯೊಂದು ಹಂತದಲ್ಲೂ ತುಂಬಾ ಅವಶ್ಯಕ ವಾದದ್ದು ಎಂದರು.ಜಿಲ್ಲೆಯು ಉತ್ತಮ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶದ ಜೊತೆಗೆ ಗುಣಾತ್ಮಕ ಹಾಗೂ ಪರಿಣಮಾತ್ಮಕ ಶಿಕ್ಷಣದಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಗಳಿಸಿರುವುದು ಹರ್ಷದಾಯಕ ವಾದ್ದದ್ದು. ಈ ಉತ್ತಮ ಫಲಿತಾಂಶದ ಹಿಂದೆ ಅನೇಕ ಅಧಿಕಾರಿಗಳು ಮತ್ತು ಶಿಕ್ಷಕರ ಶ್ರಮವಿದೆ ಎಂದು ಎಲ್ಲರಿಗೂ ಅಭಿನಂದನೆ ತಿಳಿಸಿದರು.
ಯುವ ಸಮುದಾಯದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು.ವಿದ್ಯಾರ್ಥಿಗಳಲ್ಲಿ ಕೇವಲ ಅಂಕಗಳಿಸುವ ಕೌಶಲ್ಯವನ್ನು ಮಾತ್ರವಲ್ಲದೆ ಆತ್ಮಸ್ಥೈರ್ಯ ದೊಂದಿಗೆ ಜೀವನ ನಡೆಸುವ ಉತ್ತಮವಾದ ಸಮಾಜ ರೂಪಿಸುವಂತೆ ತಿಳಿಸಿದರು.
ಇದೇ ವೇಳೆ, ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಕೆಲವು ಶಿಕ್ಷಕರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಯಮ್ಮ,ಜಿಲ್ಲಾ ಪಂಚಾಯತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ, ಅಪರ ಜಿಲ್ಲಾಧಿಕಾರಿ ಡಾ: ಜಗದೀಶ್.ಕೆ.ನಾಯಕ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಗಂಗಮಾರೇಗೌಡ ಸೇರಿದಂತೆ ಶಿಕ್ಷಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.