ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಹಿರಿಯ ಯಕ್ಷಗಾನ ಕಲಾವಿದ ಕೆ.ಸಿ.ನಾರಾಯಣ ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿಯ 2019 ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
68ರ ಹರೆಯದ ಕೆ.ಸಿ.ನಾರಾಯಣ ಅವರು ಮೂಡಲಪಾಯ ಯಕ್ಷಗಾನದಲ್ಲಿ ಸಿದ್ಧಹಸ್ತರು. ಬಾಲ್ಯದಿಂದಲೇ ಯಕ್ಷಗಾನ ಕಲೆಯನ್ನು ಮೈಗೂಡಿಸಿಕೊಂಡಿರುವ ಇವರು,5 ದಶಕಗಳಿಂದ ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಕರಿರಾಜ ಚರಿತ್ರೆ ಮೂಡಲಪಾಯ ಯಕ್ಷಗಾನದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದರೂ ಕರಿರಾಜ ಚರಿತ್ರೆಯ ಪುಂಡರೀಕಾಕ್ಷಿ ಸ್ತ್ರೀ ಪಾತ್ರ ಇವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದೆ.
ಪ್ರಸ್ತುತ ಯದ್ಲಳ್ಳಿ ಪಾಪಣ್ಣನವರ ಭಾಗವತ ಯಕ್ಷಗಾನ ಮಂಡಲಿಯಲ್ಲಿ ಭಾಗವತರಾಗಿ, ಕಾರ್‍ಯದರ್ಶಿಗಳಾಗಿ ತೊಡಗಿಸಿಕೊಂಡಿದ್ದಾರೆ. ಹಲವಾರು ಜನ ಶಿಷ್ಯ ವೃಂದವನ್ನು ಹೊಂದಿದ್ದಾರೆ. ಯದ್ಲಳ್ಳಿ ಪಾಪಣ್ಣನವರ ಯಕ್ಷಗಾನ ಮಂಡಲಿಯಿಂದ ರಾಜ್ಯದ ವಿವಿದೆಡೆ ನೀಡುವ ಕರಿರಾಜ ಚರಿತ್ರೆ ಯಕ್ಷಗಾನ ಪ್ರದರ್ಶನದಲ್ಲಿ ಕೆ.ಸಿ.ನಾರಾಯಣ ಅವರ ಪಾತ್ರ ಪ್ರಮುಖವಾಗಿದೆ. ಇವರಿಗೆ ತಾಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಸನ್ಮಾನಿಸಿ ಗೌರವಿಸಿವೆ.
ಅಕ್ಟೋಬರ್‌ನಲ್ಲಿ ಪ್ರಶಸ್ತಿ ಪ್ರದಾನ:ಕರ್ನಾಟಕ ಯಕ್ಷಗಾನ ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿದೆ.
ಪ್ರಶಸ್ತಿಗೆ ಭಾಜನರಾಗಿರುವ ಕೆ.ಸಿ.ನಾರಾಯಣ ಅವರಿಗೆ ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘ,ಯದ್ಲಳ್ಳಿ ಪಾಪಣ್ಣನವರ ಭಾಗವತ ಯಕ್ಷಗಾನ ಮಂಡಲಿ ಸೇರಿದಂತೆ ತಾಲೂಕಿನ ವಿವಿಧ ಗಣ್ಯರು ಅಭಿನಂದಿಸಿದ್ದಾರೆ.