Site icon
Harithalekhani

ಸಿ.ವಿ.ಜಿ. ಪ್ರೌಢಶಾಲೆಗೆ ಸಚಿವ ಸುರೇಶ್ ಕುಮಾರ್ ಭೇಟಿ, ಪರಿಶೀಲನೆ

ದೊಡ್ಡಬಳ್ಳಾಪುರ: ಗ್ರಾಮೀಣ ಭಾಗದಲ್ಲಿ ಕನ್ನಡ ಶಾಲೆಯನ್ನು ಉಳಿಸಲು ಸ್ಥಳೀಯರ ಮನವಿ ಹಿನ್ನಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯ ಸಿ.ವಿ.ಜಿ. ಪ್ರೌಢಶಾಲೆಗೆ ಪ್ರಾಥಮಿಕ‌ ಮತ್ತು ಪ್ರೌಢಶಾಲಾ ಸಚಿವ ಎಸ್.ಸುರೇಶ್‌ಕುಮಾರ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.  

ಸರ್ಕಾರಿ ಅನುದಾನಿತ ಸಿ.ವಿ.ಜಿ. ಪ್ರೌಢಶಾಲೆ ಒಡೆತನದ ಸುಮಾರು ಏಳರಿಂದ ಎಂಟು ಎಕರೆ ಜಮೀನು ವಿವಾದ ಹಿನ್ನಲೆ ಕನ್ನಡ ಶಾಲೆ ಮುಚ್ಚುವ ಆತಂಕದಲ್ಲಿತ್ತು. ಶಾಲೆ ಉಳಿಸಲು ಸ್ಥಳೀಯರ ಹೋರಾಟ ಸಹ ನಡೆಸಿದರು. ಈ ಹಿನ್ನೆಲೆ ಶಿಕ್ಷಣ ಸಚಿವರು ದಿಢೀರ್ ಭೇಟಿ ನೀಡಿ ಶಾಲಾ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದರು.‌ ಸ್ಥಳೀಯರು ಈ ಸಮಯದಲ್ಲಿ ಶಾಲೆ ಉಳಿಸುವಂತೆ ಸಚಿವರಲ್ಲಿ ಮನವಿ ಪತ್ರ ನೀಡಿದರು. ಈಗಾಗಲೇ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿರುವ ಸಚಿವ ಎಸ್.ಸುರೇಶ್‌ಕುಮಾರ್ ಒಂದಾನೊಂದು ಕಾಲದಲ್ಲಿ ಅತ್ಯಂತ ಭವ್ಯವಾಗಿದ್ದ ಶಾಲೆ ಇಂದು ವ್ಯವಸ್ಥಾಪಕ ಮಂಡಳಿ ಹಾಗೂ ಶಿಕ್ಷಕರ ನಡುವಿನ ಸಾಮರಸ್ಯದ ಕೊರತೆಯಿಂದ ಬಡವಾಗಿದೆ ಎಂದಿದ್ದಾರೆ. ಸುಮಾರು ಎಂಟು ಎಕರೆ ಜಾಗವುಳ್ಳ ಈ ಶಾಲೆ, ಸಮರ್ಪಿತ ತಂಡ ಹೊಂದಿರುವ ಆಡಳಿತ ಮಂಡಳಿ ಹೊಂದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು, ಊರಿನ ಜನತೆ ಹಾಗೂ ಹಳೆಯ ವಿದ್ಯಾರ್ಥಿಗಳೆಲ್ಲಾ ಈ  ಶಾಲೆಯನ್ನು ಉಳಿಸಿಕೊಡಬೇಕೆಂದು ನನ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ಸಚಿವರು ಬರೆದುಕೊಂಡಿದ್ದಾರೆ. ಇನ್ನೂ ಶಿಕ್ಷಣ ಸಚಿವರಿಗೆ ಸ್ಥಳೀಯ ಜನ ಪ್ರತಿನಿಧಿಗಳು‌ ಮತ್ತು ಶಿಕ್ಷಣ ಅಧಿಕಾರಿಗಳು ಕೈಜೋಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಸದಸ್ಯ ನಂಜುಂಡಯ್ಯ, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version